ಗೃಹ ಸಚಿವಾಲಯದ ಪ್ರಸ್ತಾವನೆಗೆ ಸ್ಪಷ್ಟೀಕರಣ ಕೋರಿದ SKM
ನವದೆಹಲಿ, ಡಿಸೆಂಬರ್ 8: ಮಂಗಳವಾರ ಬೆಳಗ್ಗೆ ಸ್ವೀಕರಿಸಿದ ಗೃಹ ಸಚಿವಾಲಯದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಸಂಯುಕ್ತ ಕಿಸಾನ್ ಮೋರ್ಚಾವು ತಮ್ಮ ಬಹುತೇಕ ಬಾಕಿ ಇರುವ ಬೇಡಿಕೆಗಳನ್ನು ಪರಿಹರಿಸಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತದೆ ಎಂದಿದೆ. ಆದರೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ 'ನಕಲಿ' ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿದೆ. ಸಿಂಘು ಗಡಿಯಲ್ಲಿ ನಡೆದ ಚರ್ಚೆಯ ನಂತರ ರೈತ ಸಂಘಗಳು ಇಂದು ಮಧ್ಯಾಹ್ನ 2 ಗಂಟೆಗೆ ಮತ್ತೆ ಸಮಾವೇಶಗೊಳ್ಳಲು ನಿರ್ಧರಿಸಿವೆ. ಇಂದು ಚರ್ಚೆ ಬಳಿಕ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ವಿಶೇಷವಾಗಿ ಪ್ರತಿಭಟನಾಕಾರರ ವಿರುದ್ಧ ನಕಲಿ ಪ್ರಕರಣಗಳು ಮತ್ತು ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಚರ್ಚಿಸಲು ಸಮಿತಿಯ ರಚನೆ ಮತ್ತು ಆದೇಶಕ್ಕೆ ಸಂಬಂಧಿಸಿದಂತೆ ರೈತ ಒಕ್ಕೂಟಗಳು ಸರ್ಕಾರದಿಂದ ಹಲವಾರು ಅಂಶಗಳ ಮೇಲೆ ಸ್ಪಷ್ಟೀಕರಣ ಕೋರಿವೆ. ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದರೆ ಮನೆಗೆ ಹೋಗಲು ಸಿದ್ಧ ಎಂದು ರೈತರು ಹೇಳಿಕೊಂಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (BKU) ಅಧ್ಯಕ್ಷ ರಾಕೇಶ್ ಟಿಕಾಯತ್ ಸರ್ಕಾರ ರೈತ ಮುಖಂಡರೊಂದಿಗೆ ಕುಳಿತು ಮಾತುಕತೆ ನಡೆಸಬೇಕು. MSP ಗಾಗಿ ಕಾನೂನಾತ್ಮಕ ಖಾತರಿಯ ಬಾಕಿ ಉಳಿದಿದೆ. ಈ ಬೇಡಿಕೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಟಿಕಾಯತ್ ಅವರ ಬೆಂಬಲಿಗರಿಗೆ ಪ್ರಮುಖ ಸಮಸ್ಯೆಯಾಗಿ ಉಳಿದಿದೆ ಎಂದಿದ್ದಾರೆ.
ಮಂಗಳವಾರ ಗೃಹ ಸಚಿವಾಲಯದ ಪ್ರಸ್ತಾವನೆಯು ಇತರ ವಿಷಯಗಳ ಜೊತೆಗೆ ಎಂಎಸ್‌ಪಿಯನ್ನು ಚರ್ಚಿಸಲು ಕೇಂದ್ರದ ಪ್ರಸ್ತಾವಿತ ಸಮಿತಿಯಲ್ಲಿ ಎಸ್‌ಕೆಎಂ ನಾಯಕರನ್ನು ಸೇರಿಸಲಾಗುವುದು ಎಂದು ಹೇಳುತ್ತದೆ. "ಇದು MSP ವಿರುದ್ಧದ ಕೃಷಿ ಕಾನೂನುಗಳು ಮತ್ತು WTO [ವಿಶ್ವ ವ್ಯಾಪಾರ ಸಂಸ್ಥೆ] ಆಡಳಿತವನ್ನು ಬೆಂಬಲಿಸಿದ ಇತರ ರೈತ ಗುಂಪುಗಳು ಸಹ ಸಮಿತಿಯ ಭಾಗವಾಗುವ ಸಾಧ್ಯತೆಯನ್ನು ತೋರಿಸುತ್ತದೆ" ಎಂದು ಅಖಿಲ ಭಾರತ ಕಿಸಾನ್ ಸಭಾದ ನಾಯಕ ಅಶೋಕ್ ಧವಳೆ ಎಚ್ಚರಿಸಿದ್ದಾರೆ. ಹೀಗಾಗಿ ಎಂಎಸ್‌ಪಿ ಕಾನೂನನ್ನು ಚರ್ಚಿಸಲು ಸಮಿತಿಯು ನಿರ್ದಿಷ್ಟ ಆದೇಶವನ್ನು ಹೊಂದಿರಬೇಕು ಎಂದಿದ್ದಾರೆ.

ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಟ್ರಾಕ್ಟರ್ ರ್‍ಯಾಲಿ ಸೇರಿದಂತೆ ಕಳೆದ ವರ್ಷ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ. ಒಮ್ಮೆ ಆಂದೋಲನವನ್ನು ಹಿಂತೆಗೆದುಕೊಂಡರೆ, ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಮತ್ತು ದೇಶದ ರಾಜಧಾನಿಯಲ್ಲಿ ಪ್ರತಿಭಟನಾಕಾರರ ಮೇಲೆ ದಾಖಲಾದ ಪ್ರಕರಣಗಳನ್ನು ಕೇಂದ್ರದಿಂದ ಹಿಂಪಡೆಯಲಾಗುವುದು ಎಂದು ಗೃಹ ಸಚಿವಾಲಯದ ಪ್ರಸ್ತಾವನೆ ತಿಳಿಸಿದೆ.

ಬಲ್ಬೀರ್ ಸಿಂಗ್ ರಾಜೇವಾಲ್ ಪ್ರತಿಕ್ರಿಯೆ:
"ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಇತರ ಭಾಗಗಳಲ್ಲಿಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣಗಳನ್ನು ಹಿಂಪಡೆದ ನಂತರವೇ ಪ್ರತಿಭಟನೆ ಕೊನೆಗೊಳ್ಳಲು ಸಾಧ್ಯ. ನಾವು ಯಾವುದೇ ಭರವಸೆಗಳನ್ನು ನಂಬುವುದಿಲ್ಲ "ಎಂದು ಪಂಜಾಬ್‌ನ ಭಾರತೀಯ ಕಿಸಾನ್ ಯೂನಿಯನ್‌ನ ತನ್ನದೇ ಆದ ಬಣದ ಮುಖ್ಯಸ್ಥರಾಗಿರುವ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದರು.
"2017 ರಲ್ಲಿ ಮಂಡಸೌರ್ ಪೋಲಿಸ್ ಫೈರಿಂಗ್ ನಂತರದ ಪ್ರತಿಭಟನೆಯ ಸಮಯದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಈ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ, "ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘದ ಮುಖಂಡ ಶಿವಕುಮಾರ್ ಶರ್ಮಾ 'ಕಕ್ಕಾಜಿ' ಹೇಳಿದರು. ಈ ಮೂಲಕ ಸರ್ಕಾರದ ಷರತ್ತುಬದ್ಧ ಭರವಸೆಗಳ ಬಗ್ಗೆ ರೈತರು ಏಕೆ ಜಾಗರೂಕರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸಿದರು.

ಮತ್ತೊಂದು BKU ಬಣದ ಮುಖ್ಯಸ್ಥರಾಗಿರುವ ಹರಿಯಾಣ ನಾಯಕ ಗುರ್ನಾಮ್ ಸಿಂಗ್ ಚದುನಿ, ಪ್ರಕರಣಗಳನ್ನು ಹಿಂಪಡೆಯಲು ಸಮಯ ಮಿತಿಯ ಅಗತ್ಯವಿದೆ. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದವರ ಸಂಬಂಧಿಕರಿಗೆ ಪರಿಹಾರಕ್ಕೆ ಸಂಬಂಧಿಸಿದಂತೆ, ಎಲ್ಲಾ ರಾಜ್ಯಗಳು ಪಂಜಾಬ್ ಮಾದರಿಯನ್ನು ಅನುಸರಿಸಲು ಒಪ್ಪಿಕೊಳ್ಳಬೇಕು. ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಗೃಹ ವ್ಯವಹಾರಗಳ ಸಚಿವಾಲಯ (MHA) ಪ್ರಸ್ತಾವನೆಯಲ್ಲಿ ಈ ಕುರಿತು ಹರಿಯಾಣ ಮತ್ತು ಯುಪಿಯಲ್ಲಿ ಪರಿಹಾರಕ್ಕಾಗಿ ಸರ್ಕಾರಗಳು ತಾತ್ವಿಕ ಒಪ್ಪಿಗೆ ನೀಡಿವೆ. ವಿದ್ಯುಚ್ಛಕ್ತಿ ಮಸೂದೆಗೆ ಸಂಬಂಧಿಸಿದಂತೆ, ಕೇಂದ್ರದ ಪ್ರಸ್ತಾವನೆಯು ಸಂಸತ್ತಿನಲ್ಲಿ ಮಂಡಿಸುವ ಮೊದಲು ಎಲ್ಲಾ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. SKM ನಾಯಕರಿಗೆ ಕೇಂದ್ರ ಸಚಿವರು ಈಗಾಗಲೇ ಮಾತುಕತೆಯ ಸಮಯದಲ್ಲಿ ಕರಡು ಮಸೂದೆಯನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ. ಹುಲ್ಲು ಸುಡುವ ಕುರಿತು ಪ್ರಸ್ತಾವನೆಯಲ್ಲಿ ರೈತರಿಗೆ ಈಗಾಗಲೇ ಕ್ರಿಮಿನಲ್ ಹೊಣೆಗಾರಿಕೆಯಿಂದ ವಿನಾಯಿತಿ ನೀಡಲಾಗಿದೆ. ಈ ರೀತಿಯಲ್ಲಿ ಎಲ್ಲಾ ಐದು ಬೇಡಿಕೆಗಳನ್ನು ಸರಿಯಾಗಿ ಪರಿಹರಿಸಲಾಗಿದೆ. ಈಗ ರೈತರ ಆಂದೋಲನವನ್ನು ಮುಂದುವರಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಸಚಿವಾಲಯದ ಪ್ರಸ್ತಾವನೆ ಹೇಳಿದೆ.
ಗೃಹ ಖಾತೆಯ ರಾಜ್ಯ ಸಚಿವ ಅಮಿತ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಬೇಕೆಂಬ ರೈತರ ಆರನೇ ಬೇಡಿಕೆಯನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿಲ್ಲ, ಇದು ವಿಶೇಷವಾಗಿ ಯುಪಿಯಿಂದ ಪ್ರತಿಭಟನಾಕಾರರಲ್ಲಿ ವಿವಾದದ ಸೃಷ್ಟಿಸಿದೆ.












Click it and Unblock the Notifications