ಅಪರೂಪದ ಪ್ರಕರಣ: ವಕೀಲ ಮ್ಯಾಥ್ಯೂಸ್ ನೆಡುಂಪರಗೆ ಮೂರು ತಿಂಗಳು ಜೈಲು
ನವದೆಹಲಿ, ಮಾರ್ಚ್ 28: ಆರ್.ಎಫ್.ನಾರಿಮನ್ ಹಾಗೂ ವಿನೀತ್ ಸರಣ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಬುಧವಾರಾ ಮ್ಯಾಥ್ಯೂಸ್ ನೆಡುಂಪರ ಎಂಬ ವಕೀಲರಿಗೆ ಮೂರು ತಿಂಗಳ ಜೈಲು ಶಿಕ್ಶೆ ವಿಧಿಸಿದ್ದು, ಜತೆಗೆ ಇನ್ನು ಒಂದು ವರ್ಷ ಸುಪ್ರೀಂ ಕೋರ್ಟ್ ನಲ್ಲಿ ಯಾವುದೇ ಪ್ರಕರಣದಲ್ಲಿ ವಾದ ಮಂಡಿಸದಂತೆ ನಿಷೇಧ ಹೇರಿದೆ.
ಮಾರ್ಚ್ ಹನ್ನೊಂದನೇ ತಾರೀಕಿನಂದು ಈ ಪೀಠವು ಮ್ಯಾಥ್ಯೂಸ್ ಮೇಲೆ ನ್ಯಾಯಾಂಗ ನಿಂದನೆ ಅಪರಾಧಕ್ಕಾಗಿ ನೋಟಿಸ್ ನೀಡಿತ್ತು. ನೆಡುಂಪರ ವಕೀಲರು ಬೇರೆ ಪೀಠಕ್ಕೆ ಪ್ರಕರಣ ವರ್ಗಾಯಿಸುವಂತೆ ಕೇಳಿಕೊಂಡರು. ಆರೋಪ ಪಟ್ಟಿ ಇಲ್ಲದೆ ಯಾವುದೇ ಶಿಕ್ಷೆ ನೀಡಬಾರದು ಎಂದರು. ಆದರೆ ಈ ವಾದವನ್ನು ಕೇಳಲು ಪೀಠವು ಸಿದ್ಧವಿರಲಿಲ್ಲ.
ಈಗಾಗಲೇ ಮ್ಯಾಥ್ಯೂಸ್ ರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಮತ್ತೊಂದು ಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದರು. ಮ್ಯಾಥ್ಯೂಸ್ ಬೇಷರತ್ತಾಗಿ ಕೋರ್ಟ್ ನ ಕ್ಷಮೆ ಕೋರಿದರೂ ನಿರ್ಧಾರವನ್ನು ಬದಲಿಸಲಿಲ್ಲ.

ಫಾಲಿ ಎಸ್.ನಾರಿಮನ್ ಅವರನ್ನು ಉದಾಹರಿಸುತ್ತಾ, ಜಡ್ಜ್ ಗಳ ಸಂಬಂಧಿಕರು ಮಾತ್ರ ಹಿರಿಯ ವಕೀಲರು ಆಗಲು ಸಾಧ್ಯ ಎಂದು ನೆಡುಂಪರ ಹೇಳಿದ್ದರು. ಹೀಗೆ ಮಾತನಾಡದಂತೆ ಕೋರ್ಟ್ ಎಚ್ಚರಿಕೆ ನೀಡಿದ್ದರೂ ಪದೇಪದೇ ಹೀಗೆ ಹೇಳಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಹಾಗೆ ಹೇಳೇ ಇಲ್ಲ ಎಂದಿದ್ದರು. ಕೋರ್ಟ್ ನಲ್ಲಿದ್ದ ಇತರರು ಈ ಬಗ್ಗೆ ಖಾತ್ರಿ ಪಡಿಸಿದಾಗ, ತನ್ನನ್ನು ಸಮರ್ಥನೆ ಮಾಡಿಕೊಂಡಿದ್ದರು.
ಮ್ಯಾಥ್ಯೂಸ್ ಅವರು ಫಾಲಿ ನಾರಿಮನ್ ಅವರಿಗೆ ಅವಮಾನ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಲ್ಲ. ಈ ಹಿಂದೆ ಸುಪ್ರೀಂ ಕೋರ್ಟ್, ಬಾಂಬೆ ಹೈಕೋರ್ಟ್ ಆದೇಶಗಳಲ್ಲಿ ಮ್ಯಾಥ್ಯೂಸ್ ನಡತೆ ಬಗ್ಗೆ ಪ್ರಸ್ತಾವ ಆಗಿದೆ ಎನ್ನಲಾಗಿದೆ. ಯಾವಾಗೆಲ್ಲ ಕೋರ್ಟ್ ಆದೇಶ ತನ್ನ ಪರವಾಗಿಲ್ಲ ಎಂದು ಗೊತ್ತಾಗುತ್ತದೋ ಆಗೆಲ್ಲ ಬಯ್ಗುಳ ಬಳಸಿದ್ದಾರೆ ಎಂದು ಕೂಡ ಹೇಳಲಾಗಿದೆ.
ನೆಡುಂಪರ ಅವರ ಬಹುತೇಕ ಕಕ್ಷಿದಾರರು ಸಾಲ ಪಡೆದುಕೊಂಡು ಮರಳಿಸದವರು. ತನಗೆ ಬೇಕಾದಂತೆ ಕೋರ್ಟ್ ಆದೇಶ ಪಡೆಯುವ ಸಲುವಾಗಿ ಅವರು ಪ್ರಯತ್ನಿಸಿದ್ದಾರೆ. ಕೋರ್ಟ್ ನ ಸದಸ್ಯರನ್ನು ತಮ್ಮ ಕಟು ಭಾಷೆಯಿಂದ ಬೆದರಿಸುವ ಅಭ್ಯಾಸ ಇವರಿಗಿದೆ. ಈ ಹಿಂದೆ ಬಾಂಬೆ ಹೈಕೋರ್ಟ್ ನ ಹಲವು ನ್ಯಾಯಮೂರ್ತಿಗಳ ಮುಂದೆ ಇದೇ ರೀತಿ ಭಾಷೆ ಬಳಸಿ ಉದ್ದೇಶ ಈಡೇರಿಕೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications