ಸಲ್ಲೂ ಕೃಷ್ಣ ಮೃಗ ಬೇಟೆ, ಗುದ್ದೋಡು ಕೇಸ್ ಅಪ್ಡೇಟ್ಸ್
ನವದೆಹಲಿ, ನ.5: ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಎರಡು ಕೇಸುಗಳು ಕೋರ್ಟಿನಲ್ಲಿ ಬುಧವಾರ ವಿಚಾರಣೆಗೆ ಬಂದಿತ್ತು. ಈ ಪೈಕಿ ಒಂದರಲ್ಲಿ ಅಂತಿಮ ತೀರ್ಪು ಕಾಯ್ದಿರಿಸಲಾಗಿದ್ದರೆ, ಮತ್ತೊಂದು ಪ್ರಕರಣದ ವಿಚಾರಣೆ ಮುಂದೂಡಲಾಗಿದೆ. ಕೋರ್ಟ್ ಆದೇಶ ಹೊರಬೀಳುವ ತನಕ ಸಲ್ಮಾನ್ ಅವರು ವಿದೇಶಕ್ಕೆ ಹಾರುವಂತಿಲ್ಲ.
ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಮುಕ್ತಾಯವಾಗಿದೆ. ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಶೂಟಿಂಗ್ ಗಾಗಿ ಬ್ರಿಟನ್ ಗೆ ತೆರಳಲು ಅನುಮತಿ ನೀಡುವಂತೆ ಸಲ್ಮಾನ್ ಕೋರಿದ್ದರು. ರಾಜಸ್ಥಾನ ಸರ್ಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ನೀಡಿದ ಆದೇಶವನ್ನು ತಡೆ ನೀಡಬೇಕೆಂದು ಕೋರಿತ್ತು.
ಚಿತ್ರದ ಶೂಟಿಂಗ್ ಮುಗಿಯುವವರೆಗೂ ಆದೇಶವನ್ನು ಕಾಯ್ದಿರಿಸಬೇಕೆಂದು ಸಲ್ಮಾನ್ ಖಾನ್ ಮನವಿ ಮಾಡಿದ್ದರು ಈ ಬಗ್ಗೆ ವಿಚಾರಣೆ ನಡೆಸಿದ ಜಸ್ಟೀಸ್ ಎಸ್ ಜೆ ಮುಖ್ಯೋಪಾಧ್ಯಾಯ್ ಹಾಗೂ ಜಸ್ಟೀಸ್ ಎ.ಕೆ ಗೋಯಲ್ ಅವರು ಆದೇಶವನ್ನು ಕಾಯ್ದಿರಿಸಿದ್ದು, ಬ್ರಿಟನ್ ವೀಸಾ ಪಡೆಯಲು ಆರೋಪಿಗೆ ಅನುಕೂಲವಾಗಲೆಂದು ಶಿಕ್ಷೆ ಬಗ್ಗೆ ಆದೇಶವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ವಿರುದ್ಧ ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು. ಕೆಳ ಹಂತದ ನ್ಯಾಯಲಯದಲ್ಲಿ ಆರೋಪಿಗಳ ಆರೋಪ ಸಾಬೀತಾಗಿತ್ತು ಆದರೆ, ಮರು ವರ್ಷವೇ ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿತ್ತು. ಈಗ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಅಂತಿಮ ಹಂತ ತಲುಪಿದೆ.
ಗುದ್ದೋಡು ಪ್ರಕರಣ: 2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಕಾರು ಚಾಲನೆ ಮಾಡಿದ ವೇಳೆ ಸಲ್ಮಾನ್ ಅವರು ಕುಡಿದಿರಲಿಲ್ಲ. ಘಟನೆ ನಂತರ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ಪ್ರತ್ಯಕ್ಷದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನ್ನ ಸಹೋದರಿ ಅರ್ಪಿತಾ ಅವರ ಮದುವೆ ಸಿದ್ಧತೆಯಲ್ಲಿ ಕಾರ್ಯನಿರತವಾಗಿರುವುದರಿಂದ ಸಲ್ಮಾನ್ ಖಾನ್ ಅವರು ಇಂದು ವಿಚಾರಣೆಗೆ ಹಾಜರಾಗಿಲ್ಲ ಎಂದು ಸಲ್ಮಾನ್ ಪರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಸಾಕ್ಷಿಗಳ ವಿಚಾರಣೆ ಬಾಕಿ ಇರುವುದರಿಂದ ಇತರ ಪ್ರತ್ಯಕ್ಷದರ್ಶಿಗಳ ವಿಚಾರಣೆ ನವೆಂಬರ್ 24 ಮತ್ತು 25 ರಂದು ನಡೆಯಲಿದ್ದು, ಅಂದು ನ್ಯಾಯಾಲಯಕ್ಕೆ ಸಲ್ಮಾನ್ ಖಾನ್ ಖುದ್ದು ಹಾಜರಾಗುವಂತೆ ಕೋರ್ಟ್ ಆದೇಶಿಸಿದೆ.












Click it and Unblock the Notifications