RSS ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಮಂತ್ರಣ ಬಂದಿಲ್ಲ: ಕಾಂಗ್ರೆಸ್
ನವದೆಹಲಿ, ಆಗಸ್ಟ್ 28: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS )ದ ಕಡೆಯಿಂದ ಇದುವರೆಗೂ ಯಾವುದೇ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಸ್ಪಷ್ಟಪಡಿಸಿದ್ದಾರೆ.
ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಆರೆಸ್ಸೆಸ್ ನ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕಾಂಗ್ರೆಸ್ ಪಾಳೆಯದಲ್ಲಿ ಅವರ ಬಗ್ಗೆ ಕೊಂಚ ಅಸಮಾಧಾನ ಹೊಗೆಯಾಡುತ್ತಿತ್ತು.
ಆದರೆ ಇದೀಗ ರಾಹುಲ್ ಗಾಂಧಿ ಅವರಿಗೂ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂಬುದು ದೇಶದಾದ್ಯಂತ ಬಿಸಿಬಿಸಿ ಚರ್ಚೆ ಎಬ್ಬಿಸಿತ್ತು. ಸೆಪ್ಟೆಂಬರ್ 17-19 ರವರೆಗೆ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಹುಲ್ ಗಾಂಧಿ ಮಾತ್ರವಲ್ಲದೆ ಕಾಂಗ್ರೆಸ್ ನ ಇನ್ನಿತರ ಪ್ರಭಾವೀ ನಾಯಕರು ಮತ್ತು ಸಿಪಿಐಎಂ ಮುಖಂಡ ಸೀತಾರಾಮ್ ಯಚೂರಿ ಅವರಿಗೆ ಸಹ ಆಹ್ವಾನ ನೀಡಲಾಗಿದೆ ಎನ್ನಲಾಗಿತ್ತು.

ಆದರೆ ಈ ಸುದ್ದಿಯನ್ನು ತಳ್ಳಿಹಾಕಿದ್ದ ಆರೆಸ್ಸೆಸ್ ಪ್ರಚಾರ ಪ್ರಮುಖ್ ಅರುಣ್ ಕುಮಾರ್, 'ಈ ಸುದ್ದಿ ಸುಳ್ಳು' ಎಂದಿದ್ದರು.












Click it and Unblock the Notifications