ಸಚಿವ ಅಕ್ಬರ್ ರಾಜೀನಾಮೆ ವಿಚಾರ: ಆರೆಸ್ಸೆಸ್‌ನಲ್ಲಿಯೂ ಮೂಡದ ಸಹಮತ
Recommended Video

ನವದೆಹಲಿ, ಅಕ್ಟೋಬರ್ 16: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಚಿವ ಎಂ.ಜೆ. ಅಕ್ಬರ್ ಅವರ ರಾಜೀನಾಮೆ ವಿಚಾರದಲ್ಲಿ ಆರ್‌ಎಸ್‌ಎಸ್‌ನಲ್ಲಿಯೂ ಭಿನ್ನ ಅಭಿಪ್ರಾಯಗಳಿವೆ. ಆದರೆ, ಸಂಘಟನೆಯ ಬಹುಪಾಲು ಮುಖಂಡರು ಅಕ್ಬರ್ ಸಚಿವ ಸ್ಥಾನವನ್ನು ತ್ಯಜಿಸುವುದನ್ನು ಬಯಸಿದ್ದಾರೆ ಎನ್ನಲಾಗಿದೆ.
ಮಿ ಟೂ ಆಂದೋಲನಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಎಂ.ಜೆ. ಅಕ್ಬರ್ ರಾಜೀನಾಮೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅವರ ಬೆನ್ನಿಗೆ ನಿಂತಿದೆ.
ಸಾರ್ವಜನಿಕರ ಜೀವನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳು ಮಾದರಿಯಾಗಿರಬೇಕು. ಬಿಜೆಪಿಯಲ್ಲಿಯೇ ವಿವಿಧ ಪ್ರಮುಖ ಹುದ್ದೆಯಲ್ಲಿ ಇದ್ದವರು ಕೆಲವು ಪ್ರಕರಣಗಳಲ್ಲಿ ನೈತಿಕತೆಯ ಆಧಾರದಲ್ಲಿ ಹುದ್ದೆಯನ್ನು ತ್ಯಜಿಸಿದ್ದನ್ನು ನೋಡಬಹುದು.

ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ ತಮ್ಮ ಹೆಸರು ಹವಾಲಾ ಹಗರಣದಲ್ಲಿ ಕೇಳಿಬಂದಾಗ ಸಣ್ಣ ಆರೋಪದ ಕಾರಣಕ್ಕಾಗಿಯೇ ಲೋಕ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಅದೇ ರೀತಿ ನೈತಿಕತೆಯನ್ನು ಅಕ್ಬರ್ ಪ್ರದರ್ಶಿಸಬೇಕು ಎನ್ನುವುದು ಆರ್‌ಎಸ್‌ಎಸ್‌ನ ಅನೇಕರ ಅಭಿಪ್ರಾಯ.
ಈ ಪ್ರಕರಣದ ಬಗ್ಗೆ ಆರ್‌ಎಸ್‌ಎಸ್‌ನ ಅನೇಕ ಮುಖಂಡರು ಅಸಮಾಧಾನಗೊಂಡಿದ್ದಾರೆ. ಹಾಗೆಂದು ಅಕ್ಬರ್ ವಿಚಾರದಲ್ಲಿ ಆರ್‌ಎಸ್‌ಎಸ್‌ನಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿಲ್ಲ. ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸಲು ಸಂಘಟನೆ ತೀರ್ಮಾನಿಸಿದೆ. ಹೀಗಾಗಿ ಇದುವರೆಗೂ ಮೌನ ಮುರಿದಿಲ್ಲ ಎಂದು ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ಈ ಬಗ್ಗೆ ಈಗಾಗಲೇ ತನ್ನ ಅಭಿಪ್ರಾಯ ತಿಳಿಸಿದೆ. ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಂಖಿ ದಾಸ್ ಅವರ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
'ತಾವು ಪ್ರಕರಣದ ಬಲಿಪಶು ಎಂದು ವಿವರಿಸುವ ಮಹಿಳಾ ಪತ್ರಕರ್ತರನ್ನು ಬೆಂಬಲಿಸಲು ನೀವು ಮಿ ಟೂ ಆಂದೋಲನವನ್ನು ನಡೆಸಬೇಕಿಲ್ಲ. ಅಲ್ಲದೆ ಅದಕ್ಕಾಗಿ ನೀವು ಮಹಿಳೆಯೇ ಆಗಬೇಕೆಂದಿಲ್ಲ. ಯಾವುದು ತಪ್ಪು ಮತ್ತು ಯಾವುದು ಸರಿ ಎಂದು ತಿಳಿಯುವ ಸೂಕ್ಷ್ಮತೆ ನಿಮಗಿದ್ದರೆ ಸಾಕು' ಎಂದು ಈ ಪೋಸ್ಟ್ ಆಂದೋಲನವನ್ನು ಬೆಂಬಲಿಸಿತ್ತು.
ಆದರೆ, ಆರ್‌ಎಸ್‌ಎಸ್‌ನ ಮತ್ತೊಬ್ಬ ನಾಯಕ ಇಂದ್ರೇಶ್ ಕುಮಾರ್ 15 ವರ್ಷದಿಂದ ಮೌನವಾಗಿದ್ದು, ಈಗ ದೂರು ನೀಡುತ್ತಿದ್ದಾರೆ ಎಂದು ಆರೋಪ ಮಾಡಿರುವ ಮಹಿಳೆಯರ ಮೌನವನ್ನು ಪ್ರಶ್ನಿಸಿದ್ದರು.
ಆದರೂ, ಸಂಘಟನೆಯೊಳಗಿನ ಬಹುಪಾಲು ಜನರು ಸಚಿವರು ನೈತಿಕ ನೆಲೆಯ ಮೇಲೆ ಸ್ಥಾನ ತ್ಯಜಿಸುವುದು ಸೂಕ್ತ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿಯು ಈ ಪ್ರಕರಣವನ್ನು ರಾಜಕೀಯ ಲಾಭ ಮತ್ತು ನಷ್ಟದ ಲೆಕ್ಕಾಚಾರವಾಗಿ ನೋಡುತ್ತಿದೆ. ಆದರೆ, ಆರ್‌ಎಸ್ಎಸ್ ರಾಜಕೀಯದಾಚೆಗೆ ಅದನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications