ಗರೀಬ್ ರಥ ರೈಲು ನೇಪಥ್ಯಕ್ಕೆ: ಸುದ್ದಿ ಅಲ್ಲಗಳೆದ ರೈಲ್ವೇ ಇಲಾಖೆ
ನವದೆಹಲಿ, ಜುಲೈ 19: ಬಡವರಿಗೆ ಕಡಿಮೆ ಬೆಲೆಯಲ್ಲಿ ಎಸಿ ಪ್ರಯಾಣದ ಸೌಲಭ್ಯ ನೀಡಿದ್ದ ಗರೀಬ್ ರಥ ರೈಲು ಇನ್ನು ನೇಪಥ್ಯಕ್ಕೆ ಸರಿಯಲಿದೆ ಎಂಬ ಮಾಧ್ಯಮ ವರದಿಯನ್ನು ಕೇಂದ್ರ ರೈಲ್ವೇ ಇಲಾಖೆ ತಳ್ಳಿಹಾಕಿದೆ.
ಗರೀಬ್ ರಥವನ್ನು ನಿಲ್ಲಿಸುವ ಯಾವುದೇ ಯೋಜನೆ, ಯೋಚನೆ ಇಲಾಖೆಯ ಮುಂದಿಲ್ಲ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.
ಗರೀಬ್ ರಥ ರೈಲನ್ನು ಸರ್ಕಾರ ಇನ್ನು ಮುಂದೆ ನಿಲ್ಲಿಸಲಿದೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿದ್ದವು. ಬಡವರಿಗೆ ಕಡಿಮೆ ಬೆಲೆಯಲ್ಲಿ ಎಸಿ ಕೋಚ್ ಪ್ರಯಾಣ ಸೌಲಭ್ಯ ಒದಗಿಸಿದ್ದ ಗರೀಬ್ ರಥ ಎಕ್ಸ್ ಪ್ರೆಸ್ ರೈಲಿಗೆ ಹೊಸ ಕೋಚುಗಳನ್ನು ನಿರ್ಮಿಸುವುದನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಟ್ರೇನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆಯೇ ಅಥವಾ ಇದನ್ನೇ ಬೇರೆ ರೀತಿ ಬದಲಾಯಿಸಲಾಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ವರದಿ ಮಾಡಲಾಗಿತ್ತು.

ಈಗಾಗಲೇ ಕತಗೊಂಡಮ್-ಜಮ್ಮು ಮತ್ತು ಕತಗೊಂಡಮ್-ಕಾನ್ಪುರ ಮಾರ್ಗವಾಗಿ ಚಲಿಸುತ್ತಿದ್ದ ಗರೀಬ್ ರಥ ರೈಲಿನ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಮಾರ್ಗದಲ್ಲಿ ಎಕ್ಸ್ ಪ್ರೆಸ್ ಟ್ರೇನ್ ಸಂಚಾರ ಆರಂಭಿಸಲಾಗಿದ್ದು, ಇವುಗಳ ಬೆಲೆ ಅಧಿಕವಾಗಿದ್ದು, ಜನಸಾಮಾನ್ಯರಿಗೆ ರೈಲು ಪ್ರಯಾಣವೂ ದುಬಾರಿ ಎನ್ನಿಸಿದೆ. ಈ ಮಾರ್ಗದಲ್ಲಿ ಗರೀಬ್ ರಥ ರೈಲು ಸಂಚಾರವನ್ನು ನಿಲ್ಲಿಸಿದ್ದು, ಈ ವರದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.
ಗರೀಬ್ ರಥ ರೈಲುಗಳು 10-14 ವರ್ಷ ಹಳೆಯವಾಗಿದ್ದು, ಸುರಕ್ಷತೆಯ ದೃಷ್ಟಿಯನ್ನು ಯೋಚಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿತ್ತು.
2006 ರಲ್ಲಿ ಆಗಿನ ಕೇಂದ್ರ ರೈಲ್ವೇ ಸಚಿವರಾಗಿದ್ದ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಗರೀಬ್ ರಥ್ ರೈಲನ್ನು ಪರಿಚಯಿಸಿದ್ದರು. ಪ್ರಸ್ತುತ ಗರೀಬ್ ರಥದ 26 ಜೊತೆ ಟ್ರೇನುಗಳು ಕಾರ್ಯನಿರ್ವಹಿಸುತ್ತಿವೆ.












Click it and Unblock the Notifications