ಕೆಂಪು ಕೋಟೆ ಮೇಲೆ ಕತ್ತಿವರಸೆ; ದೆಹಲಿ ಗಲಭೆ ಆರೋಪಿ ಬಂಧನ
ನವದೆಹಲಿ, ಫೆಬ್ರವರಿ 17: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ದೆಹಲಿ ಕೆಂಪು ಕೋಟೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನಿಂದರ್ ಸಿಂಗ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೆಂಪು ಕೋಟೆ ಗಲಭೆ ಪ್ರಕರಣದಲ್ಲಿ ಮನಿಂದರ್ ಸಿಂಗ್ ಆರೋಪಿಯಾಗಿದ್ದು, ಮಂಗಳವಾರ ಸಂಜೆ ದೆಹಲಿ ಪೊಲೀಸರ ವಿಶೇಷ ಪಡೆ ಈತನನ್ನು ಬಂಧಿಸಿದೆ. ಜೊತೆಗೆ ದೆಹಲಿಯ ಸ್ವರೂಪ ನಗರದಲ್ಲಿನ ಈತನ ಮನೆಯಲ್ಲಿ 4.3 ಅಡಿಯ ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 30 ವರ್ಷದ ಮನಿಂದರ್ ಸಿಂಗ್ ಕಾರ್ ಎಸಿ ಮೆಕ್ಯಾನಿಕ್ ಆಗಿದ್ದು, 41.1 ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿಯಲ್ಲಿ ಬಂಧಿಸಲಾಗಿದೆ.
ತನಿಖೆ ವೇಳೆ ಜನವರಿ 26ರಂದು ಕೆಂಪು ಕೋಟೆ ಬಳಿ ಈತನ ಕತ್ತಿವರಸೆ ವಿಡಿಯೋ ಕೂಡ ಮೊಬೈಲ್ ನಲ್ಲಿ ದೊರೆತಿದೆ. ಸಿಂಘು ಗಡಿಯಲ್ಲಿನ ಪ್ರತಿಭಟನೆ ಜಾಗದಲ್ಲಿ ಮನಿಂದರ್ ಸಿಂಗ್ ಉಪಸ್ಥಿತನಿದ್ದ ಫೋಟೊಗಳು ಲಭಿಸಿವೆ.

"ಮನಿಂದರ್ ಕೆಂಪು ಕೋಟೆ ಬಳಿ ಎರಡು ಕತ್ತಿಗಳನ್ನು ಹಿಡಿದುಕೊಂಡು ನೃತ್ಯ ಮಾಡುತ್ತಿದ್ದ. ಇದು ಪ್ರತಿಭಟನಾಕಾರರನ್ನು ಗಲಭೆ ಕೈಗೊಳ್ಳಲು ಪ್ರಚೋದಿಸಿದೆ. ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಮೆರವಣಿಗೆಯಲ್ಲಿ ಈತ ಪಾಲ್ಗೊಂಡಿದ್ದ" ಎಂದು ಪೊಲೀಸರು ತಿಳಿಸಿದ್ದಾರೆ. ತನ್ನೊಂದಿಗೆ ಆರು ಜನರನ್ನೂ ಈ ಪ್ರತಿಭಟನೆಗೆ ಮನಿಂದರ್ ಕರೆದುಕೊಂಡು ಬಂದಿದ್ದು, ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭ ಎರಡು ಕತ್ತಿಗಳನ್ನು ತನ್ನೊಂದಿಗೆ ತಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮನಿಂದರ್ ಕತ್ತಿವರಸೆ ತರಬೇತಿ ಶಾಲೆ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಇನ್ನಷ್ಟು ತನಿಖೆಯನ್ನು ಮುಂದುವರೆಸಲಾಗಿದೆ.












Click it and Unblock the Notifications