ದಲಿತರೇ, ನೋವಾಗಿದ್ದರೆ ಕ್ಷಮಿಸಿಬಿಡಿ: ರಾಮದೇವ್
ನವದೆಹಲಿ, ಏ.26: ಯೋಗಗುರು ಬಾಬಾ ರಾಮದೇವ್ ಅವರು ತಮ್ಮ ಹೇಳಿಕೆ ಹಿಂಪಡೆದಿದ್ದಲ್ಲದೆ, ದಲಿತರಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.
ದಲಿತ ಸಮುದಾಯದ ಬಗ್ಗೆ ನಮಗೆ ಅಪಾರ ಗೌರವವಿದೆ. ನಾನು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವಾಗ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಉಲ್ಲೇಖ ಮಾಡುವಾಗ ಈ ರೀತಿ ಮಾತುಗಳನ್ನು ಬಳಸಬೇಕಾಯಿತು. ನನ್ನ ಹೇಳಿಕೆ ಮಾಧ್ಯಮಗಳಲ್ಲಿ ತಿರುಚಲಾಗಿದೆ. ದಲಿತರನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ರಾಹುಲ್ ಹಾಗೂ ಅವರ ತಾಯಿ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಯತ್ನಿಸಿದೆ ಎಂದಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ದೇವ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಾಬಾ ರಾಮದೇವ್ ಅವರ ವಿರುದ್ಧ ಐಪಿಸಿ ಸೆಕ್ಷನ್ 171(ಜಿ) ಅನ್ವಯ ಮಹಾನಗರ್ ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಹೆಚ್ಚುವತಿ ಎಸ್ ಪಿ ಹಬಿಬುಲ್ ಹಸನ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಪಿಕನಿಕ್ ಹಾಗೂ ಹನಿಮೂನ್ ಗಾಗಿ ದಲಿತರ ಮನೆಗಳಿಗೆ ಭೇಟಿ ನೀಡುತ್ತಾರೆ ಎಂದು ನಿನ್ನೆ ರಾಮದೇವ್ ಹೇಳಿದ್ದರು. ಬಾಬಾ ರಾಮದೇವ್ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಹೇಳಿಕೆ ಸಂಬಂಧ ಬಾಬಾ ರಾಮದೇವ್ ಕ್ಷಮೆಯಾಚನೆಗೆ ಹಲವು ಸಂಘಟನೆಗಳು ಆಗ್ರಹಿಸಿದ್ದವು.

ರಾಮದೇವ್ ಅವರ ಹೇಳಿಕೆ ದಲಿತ ವಿರೋಧಿ ಎಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ಈ ಸಂಬಂಧ ಯೋಗ ಗುರು ಬಾಬಾ ರಾಮ್ದೇವ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಈ ಮಧ್ಯೆ. ದಲಿತರನ್ನು ಅವಹೇಳನ ಮಾಡಿದ ಆರೋಪದ ಮೇಲೆ ಬಾಬಾ ರಾಮ್ದೇವ್ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಮಾತನಾಡಿದ್ದ ರಾಮದೇವ್, ರಾಹುಲ್ ಗಾಂಧಿ ಅವರು ಹನಿಮೂನ್ ಹಾಗೂ ಪಿಕನಿಕ್ ಗಾಗಿ ದಲಿತರ ಮನೆಗಳಿಗೆ ತೆರಳುತ್ತಾರೆ ಎಂದಿದ್ದರು. ಅಲ್ಲದೆ ನೀನು ವಿದೇಶಿ ಹುಡುಗಿಯನ್ನು ಮದುವೆಯಾದರೆ ಪ್ರಧಾನಿಯಾಗುವುದಿಲ್ಲ ಎಂದು ಸೋನಿಯಾ ಗಾಂಧಿ ಅವರು ರಾಹುಲ್ ಹೇಳಿದ್ದಾರೆ. ಆದರೆ ಭಾರತೀಯ ಹುಡುಗಿಯನ್ನು ಮದುವೆಯಾಗುವುದು ರಾಹುಲ್ ಗೆ ಇಷ್ಟವಿಲ್ಲ ಎಂದಿದ್ದರು.












Click it and Unblock the Notifications