Breaking: ರಾಮಸೇತು; ಕೇಂದ್ರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಗರಂ
ನವದೆಹಲಿ, ಆಗಸ್ಟ್ 22: ರಾಮಸೇತುವನ್ನು ರಾಷ್ಟ್ರೀಯ ಪರಂಪರೆಯ ಸ್ಮಾರಕವೆಂದು ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ರಾಜ್ಯಸಭಾ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮುಂದೂಡಿದೆ.
ಸುಬ್ರಮಣಿಯನ್ ಸ್ವಾಮಿ 2007 ರಲ್ಲಿ ಸೇತುಸಮುದ್ರಂ ಶಿಪ್ ಚಾನೆಲ್ ಯೋಜನೆಯ ವಿರುದ್ಧ ಮನವಿ ಸಲ್ಲಿಸಿ, ರಾಮಸೇತುವನ್ನು ರಾಷ್ಟ್ರೀಯ ಪರಂಪರೆಯ ಸ್ಮಾರಕವೆಂದು ಘೋಷಿಸಬೇಕು ಎಂದು ಪ್ರಸ್ತಾಪಿಸಿದ್ದರು.
ರಾಮಸೇತುವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕವೆಂದು ಘೋಷಿಸಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (ಎನ್‌ಎಂಎ) ಜೊತೆಗೆ ಭಾರತ ಸರ್ಕಾರಕ್ಕೆ ಆದೇಶ ಮತ್ತು ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಮನವಿಯಲ್ಲಿ ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ರಾಮಸೇತು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ರಾಮೇಶ್ವರಂ ದ್ವೀಪ ಎಂದೂ ಕರೆಯಲ್ಪಡುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳಿಂದ ನಿರ್ಮಿಸಿರುವ ಸೇತುವೆಯಾಗಿದೆ.
ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಎ.ಎಸ್. ಬೊಪ್ಪಣ್ಣ ಅವರನ್ನೊಳಗೊಂಡ ಪೀಠವು, ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳುವುದು ಕಾರ್ಯಾಂಗದ ಅಧಿಕಾರ ಎಂದು ತಿಳಿಸಿದ್ದಾರೆ.
ಆದರೆ, ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ ಎಂಬ ನೆಪದಲ್ಲಿ ಕೇಂದ್ರ ಸರಕಾರ ಇದರ ಕುರಿತು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಡಾ.ಸ್ವಾಮಿ ಪೀಠಕ್ಕೆ ತಿಳಿಸಿದರು. ಇದೇ ವೇಳೆ ಕೆಲವು ದಿನಗಳ ಹಿಂದಷ್ಟೇ ಈ ವಿಷಯವನ್ನು ತನಗೆ ವಹಿಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಇನ್ನು, ಮಧ್ಯಂತರದಲ್ಲಿ ಈ ವಿಷಯದಲ್ಲಿ ಕೇಂದ್ರ ಸರಕಾರ ತನ್ನ ಪ್ರತಿವಾದದ ಅಫಿಡವಿಟ್ ಸಲ್ಲಿಸಲು ಮತ್ತು ನಿಲುವು ತೆಗೆದುಕೊಳ್ಳುವಂತೆ ನ್ಯಾಯಾಲಯ ತಿಳಿಸಬೇಕು. ಕೇಂದ್ರ ಸರಕಾರವು ತನ್ನ ಅರ್ಜಿಯನ್ನು ವಿರೋಧಿಸುತ್ತಿದ್ದರೆ, ಅದನ್ನು ಸ್ಪಷ್ಟವಾಗಿ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ತಮ್ಮದೆ ಸರಕಾರದ ವಿರುದ್ಧ ಕಿಡಿ ಕಾರಿರುವ ಸುಬ್ರಮಣಿಯನ್ ಸ್ವಾಮಿ, "ರಾಮ ಸೇತುವನ್ನು ಪ್ರಾಚೀನ ಪರಂಪರೆಯ ಸ್ಮಾರಕವಾಗುವ ಅಂತಿಮ ಹಂತಕ್ಕೆ ಇಂದು ಸುಪ್ರೀಂ ಕೋರ್ಟ್ ಕೊಂಡೊಯ್ದಿದೆ. ಹೌದು ಇಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಹೌದಾದರೆ ನನ್ನ ಗೆಲುವು. ಇಲ್ಲದಿದ್ದರೆ, ಅದು 2024 ರಲ್ಲಿ ಮೋದಿಯವರ ಸೋಲು" ಎಂದಿದ್ದಾರೆ.












Click it and Unblock the Notifications