ರಾಹುಲ್ ಗಾಂಧಿ ಸುಳ್ಳಿನ ಸೃಷ್ಟಿಕರ್ತ: ಬಿಜೆಪಿ ವಾಗ್ದಾಳಿ
ನವದೆಹಲಿ, ಅಕ್ಟೋಬರ್ 26: "ರಾಹುಲ್ ಗಾಂಧಿ ಒಬ್ಬ ಸುಳ್ಳಿನ ಸೃಷ್ಟಿಕರ್ತ. ರಫೇಲ್ ಡೀಲ್ ಕುರಿತು ದಿನೇ ದಿನೇ ಅವರೇ ಸುಳ್ಳನ್ನು ಸೃಷ್ಟಿಸುತ್ತಿದ್ದಾರೆ" ಎಂದು ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದೆ.
"ಅದು ಸಿಬಿಐ ನಿರ್ದೇಶಕರ ವಿಷಯದಲ್ಲಿರಬಹುದು ಅಥವಾ ರಫೇಲ್ ಡೀಲ್ ವಿಷಯಕ್ಕೆ ಸಂಬಂಧಿಸಿದ್ದಿರಬಹುದು, ರಾಹುಲ್ ಗಾಂಧಿ ನೀಡುವ ಹೇಳಿಕೆಗಳು ಸುಳ್ಳಿನ ಕಂತೆಗಳಿಂದ ತುಂಬಿವೆ. ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಕಾಂಗ್ರೆಸ್ ತಾಳ್ಮೆಯನ್ನು ಕಳೆದುಕೊಂಡಿದೆ" ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ದೂರಿದ್ದಾರೆ.
"ಇಷ್ಟು ದಿನ ರಫೇಲ್ ಡೀಲ್ ಬಗ್ಗೆ ಸುಳ್ಳನ್ನು ಸೃಷ್ಟಿಸುತ್ತಿದ್ದರು. ಇದೀಗ ಸಿಬಿಐ ನಿರ್ದೇಶಕರ ವಿಷಯಕ್ಕೆ ಸುಳ್ಳು ಸೃಷ್ಟಿಸುತ್ತಿದ್ದಾರೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ಹುದ್ದೆಯಿಂದ ಕಿತ್ತೆಸೆಯಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಅವರನ್ನು ಕೇವಲ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ" ಎಂದು ಜಾವ್ಡೇಕರ್ ಸ್ಪಷ್ಟನೆ ನೀಡಿದರು.

"ಮತ್ತೊಂದು ಸುಳ್ಳು ಎಂದರೆ, ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಸರ್ಕಾರ ಕಳಿಸಿದ್ದಕ್ಕೆ ಅವರು ನೀಡಿದ ಕಾರಣ! 'ಸಿಬಿಐ ನಿರ್ದೇಶಕರು ರಫೇಲ್ ಡಿಲ್ ಬಗ್ಗೆ ತನಿಖೆ ನಡೆಸುತ್ತಿದ್ದರು. ಅದಕ್ಕೆಂದೇ ಅವರನ್ನು ರಜೆಯ ಮೇಲೆ ಕಳಿಸಲಾಗಿದೆ. ಅದಕ್ಕೆ ಸಂಬಧಿಸಿದ ದಾಖಲೆಗಳು ನನ್ನ ಬಳಿ ಇವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಇವೆಲ್ಲವೂ ಶುದ್ಧ ಸುಳ್ಳು" ಎಂದು ಜಾವ್ಡೇಕರ್ ಹೇಳಿದ್ದಾರೆ.
'ರಫೇಲ್ ಡಿಲ್ ಕುರಿತು ವರ್ಮಾ ವತನಿಖೆ ನಡೆಸುತ್ತಿದ್ದರಿಂದ ಅವರನ್ನು ರಜೆಯ ಮೇಲೆ ಕಳಿಸಲಾಗಿದೆ. ಏಕೆಂದರೆ ರಫೇಲ್ ಡಿಲ್ ತನಿಖೆಯಿಂದ ಮೋದಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇತ್ತು' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು.












Click it and Unblock the Notifications