ಸೇತುವೆ ಕಟ್ಟಿ, ಗೋಡೆಯನ್ನಲ್ಲ; ರಾಹುಲ್ ಗಾಂಧಿ ಸಲಹೆ
ನವದೆಹಲಿ, ಫೆಬ್ರುವರಿ 02: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದ್ದು, ದೆಹಲಿ ಗಡಿಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಗೆ ಸಲಹೆ ನೀಡಿದ್ದಾರೆ.
"ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್ ಬಿಜೆಪಿ ಕುರಿತು ಮಾಡಿದ್ದಾರೆ. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭ ಗಲಭೆ ಸಂಭವಿಸಿದ ನಂತರ ದೆಹಲಿ ಗಡಿಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಘಾಜಿಪುರ ಹಾಗೂ ಟಿಕ್ರಿ ಗಡಿಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಟ್ರ್ಯಾಕ್ಟರ್ ಗಳು ಒಳನುಗ್ಗದಂತೆ ಮೊಳೆ ಹಾಕಲಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆಯನ್ನು ಖಂಡಿಸಿದ್ದಾರೆ.

ರೈತರ ಮೇಲೆ ಸರ್ಕಾರ ಹಲ್ಲೆ ಮಾಡಿಸುತ್ತಿದೆ. ಬೆದರಿಕೆ ಒಡ್ಡುತ್ತಿದೆ ಎಂದು ಕಳೆದ ವಾರವೂ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದರು. ಈ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಈ ಪ್ರತಿಭಟನೆ ಹಾಗೇ ಕೊನೆಗೊಳ್ಳುತ್ತದೆ ಎಂಬುದು ನಿಮ್ಮ ತಪ್ಪು ತಿಳಿವಳಿಕೆ ಎಂದು ಕಿಡಿಕಾರಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೆಹಲಿಯ ಘಾಜಿಪುರ, ಸಿಂಘು ಹಾಗೂ ಟಿಕ್ರಿ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.












Click it and Unblock the Notifications