ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹೊಸ ಸದಸ್ಯರ ಮೊದಲ ಸಭೆ
ನವದೆಹಲಿ, ಜುಲೈ 22: ಇತ್ತೀಚೆಗೆ ರಚನೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೊದಲ ಸಭೆಯು ಭಾನುವಾರ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯಿತು. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ವಕ್ತಾರ ಆರ್.ಎಸ್.ಸುರ್ಜೇವಾಲ ಸಭೆಯಲ್ಲಿ ಮಾತನಾಡಿ, ಈ ಹೊಸ ಸಮಿತಿಯನ್ನು ರಾಹುಲ್ ಗಾಂಧಿಯವರು ಅನುಭವ ಹಾಗೂ ಶಕ್ತಿಯ ಮಿಶ್ರಣ ಮತ್ತು ಭೂತ, ವರ್ತಮಾನ ಹಾಗೂ ಭವಿಷ್ಯ ಕಾಲದ ಮಧ್ಯದ ಸೇತುವೆಯಂತೆ ಎಂದು ಕರೆದಿದ್ದಾರೆ. ಕಾಂಗ್ರೆಸ್ ನ ಪುರುಷರು, ಸ್ತ್ರೀಯರು ಭಾರತದ ದಮನಿತರ ಪರವಾಗಿ ಎದ್ದು ನಿಲ್ಲುತ್ತಾರೆ ಎಂದಿದ್ದಾರೆ ಎಂದು ಹೇಳಿದರು.
ಆತ್ಮರತಿ, ಸುಳ್ಳು ಭರವಸೆಗಳನ್ನು ಮನಮೋಹನ್ ಸಿಂಗ್ ತಳ್ಳಿಹಾಕಿದ್ದಾರೆ. ದೇಶದ ಅಭಿವೃದ್ಧಿಗೆ ಗಟ್ಟಿಯಾದ ನೀತಿ ನಿರೂಪಣೆ ಬೇಕು. ಉದಾಹರಣೆಗೆ ಕೃಷಿ ಆದಾಯ ಇನ್ನು ನಾಲ್ಕು ವರ್ಷದಲ್ಲಿ ದ್ವಿಗುಣ ಆಗಬೇಕು ಅಂದರೆ ಕೃಷಿ ಪ್ರಗತಿ ದರ ಶೇ ಹದಿನಾಲ್ಕು ಇರಬೇಕು. ಆದರೆ ಅದೆಲ್ಲೂ ಕಾಣುತ್ತಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳುವ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಜುಲೈ ಹದಿನೇಳರಂದು ರಾಹುಲ್ ಗಾಂಧಿ ಆದೇಶಿಸಿದ್ದರು. ಅದು ಅನುಭವ ಹಾಗೂ ಯುವ ನಾಯಕರ ಮಿಶ್ರಣವಾಗಿದೆ. ಒಟ್ಟು ಐವತ್ತೊಂದು ಸ್ದಸ್ಯರಲ್ಲಿ, ಇಪ್ಪತ್ಮೂರು ಮಂದಿ ಮುಖ್ಯ ಸದಸ್ಯರು, ಹದಿನೆಂಟು ಶಾಶ್ವತ ಆಹ್ವಾನಿತರು ಮತ್ತು ಹತ್ತು ವಿಶೇಷ ಆಹ್ವಾನಿತರು ಇರುತ್ತಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂದರೆ, ಪಕ್ಷದ ಯಾವುದೇ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳುವಂಥದ್ದು. ಕಳೆದ ಮಾರ್ಚ್ ನಂತರ ಈ ಸಭೆ ಸೇರಿರಲಿಲ್ಲ. ಈ ಸಮಿತಿಯಲ್ಲಿ ಮೋತಿಲಾಲ್ ವೋರಾ, ಅಶೋಕ್ ಗೆಹ್ಲೋಟ್ ಮತ್ತು ಎ.ಕೆ.ಆಂಟನಿಯಂಥ ಹಿರಿಯರೂ ಇದ್ದಾರೆ.












Click it and Unblock the Notifications