ಪ್ರಧಾನಿ ಎದುರು ಕೃಷಿ ಕಾಯ್ದೆ ರದ್ದು ಸೇರಿ 3 ಬೇಡಿಕೆಯಿಟ್ಟ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್
ನವದೆಹಲಿ, ಅಕ್ಟೋಬರ್ 1: ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಶುಕ್ರವಾರ ಮೊದಲ ಬಾರಿ ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ವೇಳೆ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಪ್ರಧಾನಿ ಭೇಟಿ ಸಂದರ್ಭದಲ್ಲಿ ಮೂರು ಬೇಡಿಕೆಗಳನ್ನು ಇಟ್ಟಿದ್ದು, ನರೇಂದ್ರ ಮೋದಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿಕೊಂಡಿದ್ದಾರೆ. ಈ ಪೈಕಿ "ಒಂದು ಪಂಜಾಬಿನಲ್ಲಿ ಅಕ್ಟೋಬರ್ 10ರ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸುವುದು. ಎರಡು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಹಾಗೂ ಪ್ರತಿಭಟನಾನಿರತ ರೈತರೊಂದಿಗೆ ಸಂಧಾನ ಮಾತುಕತೆಯ ಮೂಲಕ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವುದು," ಎಂದು ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಕಳೆದ 2020ರ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಮೂರನೇ ಬೇಡಿಕೆಯೇ ಕರ್ತಾರ್‌ಪುರ್ ಕಾರಿಡಾರ್
ಪಂಜಾಬ್ ಸಿಎಂ ತಮ್ಮ ಮೂರನೇ ಬೇಡಿಕೆಯಾಗಿ ಕರ್ತಾರ್‌ಪುರ ಕಾರಿಡಾರ್ ಅನ್ನು ತಕ್ಷಣವೇ ತೆರೆಯುವುದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕೇಳಿಕೊಂಡಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ 2020 ರ ಮಾರ್ಚ್‌ನಿಂದ ಕರ್ತಾರ್‌ಪುರ್ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಯಾತ್ರಿಕರ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಭಾರತವು ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ವರದಿ ಮಾಡಿರುವುದನ್ನು ಉಲ್ಲೇಖಿಸಿದ ಪಾಕಿಸ್ತಾನ ಎಲ್ಲ ರೀತಿ ಪ್ರಯಾಣವನ್ನು ನಿಷೇಧಿಸಿದೆ. ಈ ಬಗ್ಗೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ತಿಳಿಸಲಾಗಿತ್ತು.

ಕರ್ತಾರ್‌ಪುರ್ ಕಾರಿಡಾರ್ ಒಪ್ಪಂದದ ಬಗ್ಗೆ ಮಾಹಿತಿ
ಪಾಕಿಸ್ತಾನದೊಂದಿಗಿನ ಕರ್ತಾರ್‌ಪುರ್ ಕಾರಿಡಾರ್ ಒಪ್ಪಂದದ ಪ್ರಕಾರ, ಎಲ್ಲಾ ಧರ್ಮಗಳ ಭಾರತೀಯ ಯಾತ್ರಿಕರು ಪಾಕಿಸ್ತಾನದ ಸಿಖ್ಖರ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾದ ಕರ್ತಾರ್‌ಪುರ್ ಕಾರಿಡಾರ್ ಮೂಲಕ ಗುರುದ್ವಾರ ಕರ್ತಾರ್‌ಪುರ ಸಾಹಿಬ್‌ಗೆ ವರ್ಷಪೂರ್ತಿ ವೀಸಾ ರಹಿತ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

"ದೇಶಕ್ಕಾಗಿ ಹೋರಾಡಿದ ಪಂಜಾಬಿಗರ ಸಮಸ್ಯೆ ಬಗೆಹರಿಸಿ"
"ರೈತರೊಂದಿಗೆ ಮಾತುಕತೆ ನಡೆಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ನಾನು ಮನವಿ ಮಾಡಿಕೊಂಡೆನು. ಪಂಜಾಬ್ ಯಾವಾಗಲೂ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿದ್ದು, ತಕ್ಷಣ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾಳ್ಮೆಯಿಂದ ನಮ್ಮ ಸಮಸ್ಯೆಗಳನ್ನು ಆಲಿಸಿದ್ದು, ಅವರೂ ಸಹ ವಾಸ್ತವದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಮಾತನಾಡಿದ್ದಾರೆ," ಎಂದು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಸೆಪ್ಟೆಂಬರ್ 27ರಂದು ಭಾರತ್ ಬಂದ್
ಕಳೆದ ಸೆಪ್ಟೆಂಬರ್ 27ರಂದು ರೈತ ಸಂಘಗಳು ಕರೆ ನೀಡಿದ್ದ "ಭಾರತ್ ಬಂದ್" ನಿಮಿತ್ತ ಸೋಮವಾರ ಪಂಜಾಬ್ ಮತ್ತು ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಹೆದ್ದಾರಿ, ರಸ್ತೆಗಳು ಹಾಗೂ ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದರು.












Click it and Unblock the Notifications