ಪ್ರಿಯಾಂಕ ಚುನಾವಣಾ ಪ್ರಚಾರ ಗಾಳಿ ಸುದ್ದಿಯಂತೆ!
ನವದೆಹಲಿ, ಅ.14 : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕ ವದ್ರಾ ದೇಶಾದ್ಯಂತ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್ ನಿರಾಕರಿಸಿದೆ. ಸೋಮವಾರ ಬೆಳಗ್ಗೆ ಹಬ್ಬಿದ ಸುದ್ದಿ ಸಂಜೆಯ ವೇಳೆಗೆ ತಣ್ಣಗಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವದ್ರಾ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಿಳಿಯಲಿದ್ದಾರೆ. ದೇಶಾದ್ಯಂತ ಅವರು ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ರೂಪುರೇಷೆ ತಯಾರಿಸಿದ್ದಾರೆ ಎಂದು ಸುದ್ದಿಯಾಗಿತ್ತು.

ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಿಯಾಂಕ ಪಕ್ಷದ ಪರವಾಗಿ ಪ್ರಚಾರ ಮಾಡಲಿದ್ದಾರೆ. ಮಧ್ಯಪ್ರದೇಶದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಸುದ್ದಿ ಸೋಮವಾರ ಬೆಳಗ್ಗೆ ಹಬ್ಬಿತ್ತು. ಆದರೆ, ಸಂಜೆಯ ವೇಳೆಗೆ ಕಾಂಗ್ರೆಸ್ ಈ ಸುದ್ದಿಯನ್ನು ತಳ್ಳಿ ಹಾಕಿದೆ.
ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಮಾಧ್ಯಮ ವಕ್ತಾರ ಅಜಯ್ ಮಕೇನ್, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಪ್ರಚಾರ ನಡೆಸುತ್ತಾರೆ ಎಂಬ ವರದಿಗಳನ್ನು ನಾವು ನಿರಾಕರಿಸುತ್ತೇವೆ.
ಮಧ್ಯಪ್ರದೇಶದ ಕಾಲ್ತುಳಿತ ಘಟನೆಯಿಂದ ಗಮನ ಬೇರೆಡೆ ಸೆಳೆಯಲು ಕೆಲವು ಚಾನೆಲ್‌ಗಳು ಮತ್ತು ಕೆಲವು ವ್ಯಕ್ತಿಗಳು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪ್ರಿಯಾಂಕ ಅಮೇತಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಮಾತ್ರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಹೊರತಾಗಿ ದೇಶದ ಯಾವ ರಾಜ್ಯಗಳಲ್ಲೂ ಅವರು ಪ್ರಚಾರ ನಡೆಸುವುದಿಲ್ಲ ಎಂದು ಅಜಯ್ ಮಕೇನ್ ಹೇಳುವ ಮೂಲಕ ಸುದ್ದಿಯನ್ನು ನಿರಾಕರಿಸಿದ್ದಾರೆ.












Click it and Unblock the Notifications