ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ
ನವದೆಹಲಿ, ಆಗಸ್ಟ್ 16: ಗೋರಕ್ಷಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ರಾಜಸ್ತಾನದ ಕೃಷಿಕ ಪೆಹ್ಲು ಖಾನ್‌ನ ಹತ್ಯೆ ಪ್ರಕರಣದ ಎಲ್ಲ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿನ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಘಾತ ವ್ಯಕ್ತಪಡಿಸಿದ್ದಾರೆ.
'ಪೆಹ್ಲು ಖಾನ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯದ ತೀರ್ಪು ಆಘಾತಕಾರಿ. ನಮ್ಮ ದೇಶದಲ್ಲಿ ಅಮಾನವೀಯತೆಗೆ ಯಾವುದೇ ಜಾಗ ಇರಬಾರದು. ಗುಂಪಿನಿಂದ ನಡೆದ ಹತ್ಯೆ ಅತ್ಯಂತ ಹೀನಾಯವಾದದ್ದು' ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ ಅವರ ವಿರುದ್ಧ ಬಿಹಾರದ ಮುಜಫ್ಫರ್‌ಪುರದ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಪ್ರಿಯಾಂಕಾ ಗಾಂಧಿ ಅವರ ಹೇಳಿಕೆ ನ್ಯಾಯಾಂಗದ ಆದೇಶದ ನಿಂದನೆಯಾಗಿದೆ ಮತ್ತು ಅವರು ಕೋಮು ದ್ವೇಷ ಹರಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಗೋವು ಸಾಗಿಸುತ್ತಿದ್ದ ಹರಿಯಾಣದ ಪೆಹ್ಲು ಖಾನ್ ಮೇಲೆ ಹರಿಯಾಣದಲ್ಲಿ ಗೋರಕ್ಷಕರ ಗುಂಪು ದಾಳಿ ನಡೆಸಿತ್ತು. ಬಳಿಕ ಪೊಲೀಸ್ ವಶದಲ್ಲಿದ್ದ ಪೆಹ್ಲು ಖಾನ್, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿತ್ತು. ಈ ಆರೋಪಿಗಳೆಲ್ಲರನ್ನೂ ಸಂಶಯದ ಲಾಭದ ಮೇರೆಗೆ ರಾಜಸ್ತಾನದ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಪೆಹ್ಲು ಖಾನ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸುವುದಾಗಿ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಗುಂಪು ಹತ್ಯೆಯ ವಿರುದ್ಧ ಸರ್ಕಾರವು ಆಗಸ್ಟ್ ಮೊದಲ ವಾರದಲ್ಲಿ ಕಾಯ್ದೆಯೊಂದನ್ನು ಜಾರಿಗೆ ತಂದಿದೆ. ನ್ಯಾಯಾಲಯದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications