• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರನ್ನು ಕೆರಳಿಸಿದ ಕೃಷಿ ಮಸೂದೆ ಮತ್ತು ರಾಜ್ಯಗಳ ವಿರೋಧದ ವಿವರ

|

ನವದೆಹಲಿ, ಸಪ್ಟೆಂಬರ್.28: ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ಅನುಮೋದನೆ ನೀಡಿದ್ದಾರೆ. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ.

ಸಂಸತ್ ನಲ್ಲಿ ಅಂಗೀಕಾರಗೊಂಡ ಕೃಷಿ ಸಂಬಂಧಿತ ಮಸೂದೆಗಳಿಗೆ ಅಂಕಿತ ಹಾಕದಂತೆ ಕಾಂಗ್ರೆಸ್ ಮತ್ತು ಶಿರೋಮಣಿ ಆಕಾಲಿ ದಳ ಸೇರಿದಂತೆ ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮನವಿ ಮಾಡಿಕೊಂಡಿದ್ದರು.

ರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತು

ಇದೀಗ ಕೇಂದ್ರ ಸರ್ಕಾರವು ಜಾರಿಗೊಳಿಸಿದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸೇರಿದಂತೆ 12ಕ್ಕೂ ಹೆಚ್ಚು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ದೇಶಾದ್ಯಂತ ಬಂದ್ ಗೆ ಕರೆ ನೀಡಿದ್ದು, ಪಂಜಾಬ್, ಹರಿಯಾಣದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತಿದೆ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ರಸ್ತೆ ಮತ್ತು ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ನಡೆಸಲಾಗುತ್ತಿದೆ.

ಎನ್ ಡಿಎ ಮೈತ್ರಿಕೂಟ ತೊರೆದ ಶಿರೋಮಣಿ ಅಕಾಲಿ ದಳ

ಎನ್ ಡಿಎ ಮೈತ್ರಿಕೂಟ ತೊರೆದ ಶಿರೋಮಣಿ ಅಕಾಲಿ ದಳ

ಕೃಷಿ ಸಂಬಂಧಿತ ಕಾಯ್ದೆ ಜಾರಿಗೊಳಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳದ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿವೆ. ಈ ಹಿನ್ನೆಲೆ ರೈತ ವಿರೋಧಿ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಎನ್ ಡಿಎ ಮೈತ್ರಿಕೂಟದಿಂದ ಹೊರ ಬರುವುದಾಗಿ ಶಿರೋಮಣಿ ಅಕಾಲಿ ದಳ ತಿಳಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೃಷಿ ಸಂಬಂಧಿತ ಮಸೂದೆಗಳಿಗೆ ಅಂಕಿತ ಹಾಕಿದ ಕೆಲವೇ ಕ್ಷಣಗಳಲ್ಲಿ ಹಲವು ವರ್ಷಗಳಿಂದ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಶಿರೋಮಣಿ ಅಕಾಲಿ ದಳವು ಎನ್ ಡಿಎ ಮೈತ್ರಿಕೂಟದಿಂದ ಹೊರ ನಡೆದಿದೆ. "ರಾಷ್ಟ್ರಪತಿಗಳು ಮೂರು ಮಸೂದೆಗಳಿಗೆ ಅಂಕಿತ ಹಾಕಿರುವುದು ಅತ್ಯಂತ ದುಃಖ, ನಿರಾಶಾದಾಯಕ ಮತ್ತು ದುರಾದೃಷ್ಟಕರ" ಎಂದು ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖ್ಬೀರ್ ಬಾದಲ್ ತಿಳಿಸಿದ್ದಾರೆ.

"ರಾಷ್ಟ್ರಪತಿಗಳು ನಮ್ಮ ವಿಶ್ವಾಸ ಹುಸಿಗೊಳಿಸಿದ್ದಾರೆ"

ಕೃಷಿ ಸಂಬಂಧಿತ ಮಸೂದೆಗಳನ್ನು ತಿದ್ದುಪಡಿಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಾಪಸ್ ಕಳುಹಿಸುತ್ತಾರೆ ಎಂದು ವಿಶ್ವಾಸವನ್ನು ಇಟ್ಟುಕೊಂಡಿದ್ದೆವು. ಆದರೆ ಅವರು ನಮ್ಮ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ರೈತ ವಿರೋಧಿ ಮಸೂದೆಗೆ ಅಂಕಿತ ಹಾಕಿದ್ದು, ದೇಶದ ಪಾಲಿಗೆ ಇದೊಂದು "ಕರಾಳ ದಿನ" ಎಂದು ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖ್ಬೀರ್ ಬಾದಲ್ ಬೇಸರ ವ್ಯಕ್ತಪಡಿಸಿದ್ದಾರೆ.

ರೈತ ವಿರೋಧಿ ಕಾಯ್ದೆ ಜಾರಿಗೊಳಿಸಲ್ಲ ಎಂದ 'ಮಹಾ' ಸಚಿವ

ರೈತ ವಿರೋಧಿ ಕಾಯ್ದೆ ಜಾರಿಗೊಳಿಸಲ್ಲ ಎಂದ 'ಮಹಾ' ಸಚಿವ

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳು ರೈತ ವಿರೋಧಿಯಾಗಿವೆ. ಮಹಾರಾಷ್ಟ್ರದಲ್ಲಿ ಈ ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾ ಸಾಹೇಬ್ ಥೋರತ್ ಹೇಳಿದ್ದಾರೆ. ಸಂಸತ್ ನಲ್ಲಿ ರೈತ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಅಲ್ಲಿಯೂ ಕೂಡಾ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸಿತ್ತು. ಮಹಾ ವಿಕಾಸ್ ಅಘಾದಿ ಸರ್ಕಾರವು ಮಹಾರಾಷ್ಟ್ರದಲ್ಲಿ ಕೃಷಿ ಸಂಬಂಧಿತ ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ. ಈ ವಿಚಾರದಲ್ಲಿ ಶಿವಸೇನೆ ಕೂಡಾ ನಮ್ಮ ಜೊತೆಗಿರುತ್ತದೆ. ಸೋಮವಾರ ಈ ಸಂಬಂಧ ಕಾಂಗ್ರೆಸ್ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಲಿದೆ ಎಂದು ಕಂದಾಯ ಸಚಿವ ಬಾಳಾ ಸಾಹೇಬ್ ಥೋರತ್ ತಿಳಿಸಿದ್ದಾರೆ.

"ಪಂಜಾಬ್ ನಲ್ಲೂ ರೈತ ವಿರೋಧಿ ಕಾಯ್ದೆ ಜಾರಿಯಿಲ್ಲ"

ಕೃಷಿ ಸಂಬಂಧಿತ ಮಸೂದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ತೀರಾ ದುರಾದೃಷ್ಟಕರ ಸಂಗತಿ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ರೈತರ ಹಿತ ಕಾಯುವ ದೃಷ್ಟಿಯಿಂದ ಸಾಧ್ಯವಾದಷ್ಟು ಕಾನೂನುಗಳಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಎಲ್ಲಾ ರೈತ ಸಂಘಟನೆ ಮತ್ತು ಇತರೆ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ರೈತರು ಬೆಳೆದ ಪ್ರತಿಯೊಂದು ಬೆಳೆಗೆ ಸೂಕ್ತ ಬೆಲೆ ಒದಗಿಸುವಲ್ಲಿ ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಅಮರೀಂದರ್ ಸಿಂಗ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕಾಯ್ದೆಗಳಿಂದ ಎದುರಾಗಬಹುದಾದ ವಿಪತ್ತುಗಳ ಬಗ್ಗೆ ಕೃಷಿ ತಜ್ಞರ ಜೊತೆಗೆ ಈಗಾಗಲೇ ಸರ್ಕಾರವು ಮಾಹಿತಿ ಪಡೆದುಕೊಂಡಿದೆ.

ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು?

ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು?

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೃಷಿ ಸಂಬಂಧಿತ ಮೂರು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ

2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ

3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ

English summary
President Signs Farm Bills: Maharastra Govt Refuses To Implement Policies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X