ಪಾಕ್ ಪ್ರಧಾನಿಗೆ ನರೇಂದ್ರ ಮೋದಿ ಬರೆದ ಪತ್ರದಲ್ಲೇನಿದೆ?
ನವದೆಹಲಿ, ಜೂನ್ 13: ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿ ಮತ್ತು ನೆರೆಯ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಮಧ್ಯೆ ಶಾಲು, ಸೀರೆ ವಿನಿಮಯ ಬಾಂಧವ್ಯದ ನಂತರ ಇದೀಗ ಪತ್ರ ರಾಜನೀತಿ ಪ್ರಕಟಗೊಂಡಿದೆ.
ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದು ತಮಗೆ ಅತೀವ ಸಂತಸ/ತೃಪ್ತಿ ತಂದಿದೆ ಎಂದು ಪ್ರಧಾನಿ ನವಾಜ್ ಷರೀಫ್ ಅವರು ಪತ್ರ ಮುಖೇನ ಪ್ರತಿಕ್ರಿಯಿಸುತ್ತಿದ್ದಂತೆ ಮೋದಿ ಕಡೆಯಿಂದಲೂ ಷರೀಪ್ ಅವರಿಗೆ ಒಂದು ಆತ್ಮೀಯ ಪತ್ರ ರವಾನೆಯಾಗಿರುವುದು ಸಂತಸ ತಂದಿದೆ.
ಆದರೂ ಈ ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಪಡೆಗಳು ಭಾರತದ ಸೇನಾ ಪಡೆಗಳ ಮೇಲೆ ದಾಳಿ ನಡೆಸಿರುವುದು ಆತಂಕಕಾರಿಯಾಗಿದೆ.
ಗುಂಡಿನ ಸದ್ದನ್ನಡಗಿಸಿ, ದ್ವೇಷ ವಾತಾವರಣದಿಂದ ದೂರ ಕುಳಿತು ದ್ವಿಪಕ್ಷೀಯ ಮಾತುಕತೆ ನಡೆಸುವ ಆಶಯ ಹೊಂದಿರುವ ಪ್ರಧಾನಿ ಮೋದಿ, ಪ್ರಧಾನಿ ನವಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದು, ಪತ್ರದ ಸಾರಾಂಶ ಇಂತಿದೆ:
ಆತ್ಮೀಯ ಮಿಯಾ ಸಾಹಿಬ್,

ಜೂನ್ 2ರಂದು ನೀವು ಬರೆದಿರುವ ಪತ್ರ ಮತ್ತು ಅದರಲ್ಲಿರುವ ನಿಮ್ಮ ಸಕಾರಾತ್ಮಕ ಧೋರಣೆಗಳಿಗೆ ಧನ್ಯವಾದಗಳು. (ತಾಲಿಬಾನ್ ಉಗ್ರರಿಂದ ಅಟಾಕ್: ಪಾಕ್ ಸುಸ್ತೋ ಸುಸ್ತು)
ಹೊಸ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಆನಂದ ಮತ್ತು ಗೌರವ ತಂದಿದೆ. ನಿಮ್ಮ ಉಪಸ್ಥಿತಿ ಮತ್ತು ನಮ್ಮೀ ಭಾಗದ ಇತರೆ ನಾಯಕರು ಸಹ ಪಾಲ್ಗೊಳ್ಳುವಿಕೆಯೂ ಸಮಾರಂಭಕ್ಕೆ ವಿಶೇಷ ಹೊಳಪು ತಂದಿದೆ. ಇದರಿಂದ ನಮ್ಮ ಭಾಗದ ಪ್ರಜಾಪ್ರಭುತ್ವದ ಶಕ್ತಿಯನ್ನು ಎತ್ತಿ ತೋರಿಸಿದಂತಾಗಿದೆ.
ದ್ವಿಪಕ್ಷೀಯ ಬಾಂಧವ್ಯಗಳ ಕುರಿತಾದ ನಮ್ಮ ಮಾತುಕತೆ ಮತ್ತು ಅದು ಒಂದೇ ಧಾಟಿಯಲ್ಲಿತ್ತು ಎಂಬುದು ನನ್ನನ್ನು ಉತ್ಸಾಹಿಯನ್ನಾಗಿಸಿದೆ. ನಮ್ಮೀ ಶಾಂತಿಯುತ ದ್ವಿಪಕ್ಷೀಯ ಬಾಂಧವ್ಯವು ನಮ್ಮ ಯುವಜನತೆಗೆ ಅನೇಕ ಅವಕಾಶಗಳನ್ನು ಕಲ್ಪಿಸುತ್ತದೆ. ನಮ್ಮ ಜನತೆಗೆ ಹೆಚ್ಚು ಅಭಿವೃದ್ಧಿಯನ್ನು ತಂದುಕೊಡುತ್ತದೆ. ತತ್ಫಲವಾಗಿ ನಮ್ಮೀ ಭಾಗದಲ್ಲಿ ಪ್ರಗತಿಯ ವೇಗವನ್ನು ಹೆಚ್ಚಿಸುತ್ತದೆ. ಹಾಗಾಗಿ ತಿಕ್ಕಾಟ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ನಿಮ್ಮ ಹಾಗೂ ನಿಮ್ಮ ಸರಕಾರದ ಜತೆಗೆ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಪಥದಲ್ಲಿ ಕೊಂಡೊಯ್ಯಲು ನಿಕಟವಾಗಿ ಕೆಲಸ ಮಾಡಲಿಚ್ಛಿಸುತ್ತೇನೆ.

ಈ ಸಂದರ್ಭದಲ್ಲಿ ಕರಾಚಿಯಲ್ಲಿ ಉಗ್ರರು ನಡೆಸಿದ ಭಯೋತ್ಫಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಪೈಶಾಚಿಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮುಗ್ಧ ಜೀವಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. (ಷರೀಫ್ ತವರಿಗೆ ವಾಪಸಾದ ಬೆನ್ನಲ್ಲೇ ಪಾಕ್ ಹುಚ್ಚಾಟ)
ನೀವು ನನ್ನ ತಾಯಿಗೆ ಕಳುಹಿಸಿಕೊಟ್ಟ ಸೀರೆಗಾಗಿ ನಾನು ಮತ್ತೊಮ್ಮೆ ನಿಮಗೆ ವಂದನೆ ಸಲ್ಲಿಸುತ್ತೇನೆ. ನಮ್ಮ ತಾಯಿವರೂ ನಿಮ್ಮ ಭಾವನೆಯನ್ನು ಪ್ರಶಂಸಿಸಿದ್ದಾರೆ.
ಬೆಚ್ಚನೆಯ ಗೌರವಗಳೊಂದಿಗೆ
(ನರೇಂದ್ರ ಮೋದಿ)












Click it and Unblock the Notifications