ಪ್ರಧಾನಿಗೆ ಭದ್ರತಾ ವೈಫಲ್ಯ: ತನಿಖೆ ಕೋರಿ ಅರ್ಜಿ, ಸುಪ್ರೀಂನಿಂದ ಇಂದು ವಿಚಾರಣೆ
ನವದೆಹಲಿ, ಜನವರಿ 07: ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ಆಗಮಿಸಿದ ಸಂದರ್ಭದಲ್ಲಿ ಪಂಜಾಬ್ ಸರ್ಕಾರದ ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಜನವರಿ 05ರಂದು ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಬೇಕಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆ ಆಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
Recommended Video
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ. ಪಂಜಾಬ್‌ನ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಪ್ರಧಾನಿ ಮೋದಿ ಭದ್ರತೆಯಲ್ಲಿ ಭಾರಿ ಉಲ್ಲಂಘನೆಯಾಗಿದೆ ಎಂದು ಹಿರಿಯ ವಕೀಲ ಮಣಿಂದರ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇನ್ನು ಈ ಚುನಾವಣೆ ಎದುರಿಸುತ್ತಿರುವ ರಾಜ್ಯದಲ್ಲಿ ಪ್ರಧಾನಿ ತಮ್ಮ ಕಾರ್ಯವನ್ನು ರಕ್ಷಣೆ ಇಲ್ಲದ ಕಾರಣದಿಂದಾಗಿ ರದ್ದು ಮಾಡಬೇಕಾಯಿತು ಎಂದು ಕೂಡಾ ಅರ್ಜಿಯಲ್ಲಿ ಸೇರಿಸಲಾಗಿದೆ. "ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ. ನಾವು ಅದನ್ನು ನಾಳೆ ಮೊದಲು ಆಲಿಸುತ್ತೇವೆ," ಎಂದು ನಿನ್ನೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿರನ್ನು ಒಳಗೊಂಡ ನ್ಯಾಯಪೀಠವು ಹೇಳಿದೆ.

ಲಾಯರ್ಸ್ ವಾಯ್ಸ್ ಎಂಬ ಸಂಘಟನೆ ಸಲ್ಲಿಕೆ ಮಾಡಿದ ಅರ್ಜಿಯನ್ನು ಹಿರಿಯ ವಕೀಲ ಮಣಿಂದರ್ ಸಿಂಗ್ ನ್ಯಾಯಪೀಠದ ಮುಂದೆ ಪ್ರಸ್ತಾಪ ಮಾಡಿದ್ದಾರೆ. "ಪ್ರಧಾನಿ ಮೋದಿಯವರ ಭೇಟಿಗೆ ಮುಂಚಿತವಾಗಿ ರಾಜ್ಯ ಪೊಲೀಸ್ ಪಡೆಗಳು ಮಾಡಿದ ಭದ್ರತಾ ವ್ಯವಸ್ಥೆಗಳ ಬಗ್ಗೆ ಎಲ್ಲಾ ಸಾಕ್ಷಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಟಿಂಡಾ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಬೇಕು," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ. "ಪಂಜಾಬ್‌ನಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಯು ಮತ್ತೆ ಉದ್ಭವಿಸದಂತೆ ಈಗಲೇ ತನಿಖೆ ನಡೆಸಿ ಕ್ರಮಕೈಗೊಳ್ಳುವುದು ಮುಖ್ಯ," ಎಂದು ಹಿರಿಯ ವಕೀಲರು ವಾದ ಮಾಡಿದ್ದಾರೆ.
"ಇಂತಹ ಘಟನೆ ಮತ್ತೆ ನಡೆಯಬಾರದು"
ಇನ್ನು ಪೀಠವು, "ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ," ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲ ಮಣಿಂದರ್ ಸಿಂಗ್, "ಇಂತಹ ಘಟನೆ ಪುನರಾವರ್ತನೆಯಾಗಬಾರದು ಎಂದು ನಾವು ಬಯಸುತ್ತೇವೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಈ ಭದ್ರತೆಯ ಬಗ್ಗೆ ಪರಿಣಾಮಕಾರಿ ತನಿಖೆಯ ಅಗತ್ಯವಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಯಬೇಕು. ಈ ಬಗ್ಗೆ ಅಗತ್ಯ ದಾಖಲೆಗಳನ್ನು ಜಿಲ್ಲಾ ನ್ಯಾಯಾಧೀಶರು ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಆ ಬಳಿಕ ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂದು ನಿರ್ಧಾರ ಮಾಡಬೇಕು. ದಯವಿಟ್ಟು ಈ ಆದೇಶವನ್ನು ನೀಡಿ," ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ತನಿಖೆ ನಡೆಸುವುದು ಮಾತ್ರವಲ್ಲದೇ ಪಂಜಾಬ್ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಮತ್ತು ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯರನ್ನು ಅಮಾನತು ಮಾಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸಲು ಈಗಾಗಲೇ ಕೇಂದ್ರ ಗೃಹ ಸಚಿವಾಲಯವು ತ್ರಿಸದಸ್ಯ ಪೀಠವನ್ನು ರಚನೆ ಮಾಡಿದೆ. ಈ ತ್ರಿಸದಸ್ಯ ಸಮಿತಿಯಲ್ಲಿ ಸಂಪುಟ ಸಚಿವಾಲಯದ ಕಾರ್ಯದರ್ಶಿ (ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ, ಗುಪ್ತಚರ ಬ್ಯೂರೋ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್ ಮತ್ತು ವಿಶೇಷ ರಕ್ಷಣಾ ಗುಂಪಿನ ಇನ್ಸ್‌ಪೆಕ್ಟರ್ ಜನರಲ್ ಎಸ್ ಸುರೇಶ್ ಇದ್ದಾರೆ. ಇನ್ನು ಇದಕ್ಕೂ ಮುನ್ನ ಪಂಜಾಬ್ ಸರ್ಕಾರ ಈ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿಗೆ ಮೂರು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications