ಮತ್ತೆ ಬಯಲಾಯ್ತು ಪಾಕ್ ವಿಕೃತಿ: ಕ್ರಿಕೆಟ್ ಜಾಹೀರಾತಿನಲ್ಲಿ ಅಭಿನಂದನ್ ಗೆ ಅವಮಾನ
Recommended Video
ನವದೆಹಲಿ, ಜೂನ್ 12: ಭಾರತ ಮತ್ತು ಪಾಕಿಸ್ತಾನದ ನಡುವೆ ಜೂನ್ 16 ರಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದ ಜಾಹೀರಾತೊಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು. ಈ ಸಮಯದಲ್ಲಿ ಅವರು ಟೀ ಕುಡಿಯುತ್ತ, ಪಾಕಿಸ್ತಾನಿ ಸೇನೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನೇ ಆಧಾರವಾಗಿಟ್ಟುಕೊಂಡು ಇದೀಗ ಜಾಹೀರಾತೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಈ ಜಾಹೀರಾತಿನಲ್ಲಿ ಅಭಿನಂದನ್ ವರ್ಧಮಾನ್ ಅವರಂತೆಯೇ ವೇಷಧರಿಸಿದ ವ್ಯಕ್ತಿಯೊಬ್ಬ ಟೀ ಹೀರುತ್ತ, ಪಾಕ್ ಸೇನೆ ಕೇಳುವ ಪ್ರಶ್ನೆಗೆ ಉತ್ತರಿಸುತ್ತಿರುವ ದೃಶ್ಯವನ್ನು ಪುನರ್ನಿರ್ಮಿಸಲಾಗಿದೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.
ವಿಡಿಯೋದಲ್ಲೇನಿದೆ?
ಈ ವಿಡಿಯೋದಲ್ಲಿನ ಸಂಭಾಷಣೆಯ ಸಾರಾಂಶ ಇಲ್ಲಿದೆ.
ಪಾಕ್ ಸೇನೆ: ನೀವು ಟಾಸ್ ಗೆದ್ದರೆ ಯಾವ ನಿರ್ಧಾರ ಕೈಗೊಳ್ಳುತ್ತೀರಿ?
ವ್ಯಕ್ತಿ(ಅಭಿನಂದನ್ ಅವರಂತೆ ವೇಷ ಧರಿಸಿದ): ಸಾರಿ ಸರ್, ನಾನು ನಿಮಗೆ ಅದನ್ನು ಹೇಳುವಂತಿಲ್ಲ.
ಪಾಕ್ ಸೇನೆ: ತಂಡದಲ್ಲಿರುವ ಹನ್ನೊಂದು ಜನರು ಯಾರ್ಯಾರು?
ವ್ಯಕ್ತಿ: ಸಾರಿ ಸರ್, ಅದನ್ನು ನಾನು ಹೇಳುವಂತಿಲ್ಲ.
ಪಾಕ್ ಸೇನೆ: ಟೀ ಹೇಗಿದೆ?
ವ್ಯಕ್ತಿ: ಟೀ ಬಹಳ ಚೆನ್ನಾಗಿದೆ ಸರ್
ಪಾಕ್ ಸೇನೆ: ಸರಿ, ನೀವಿನ್ನು ಹೊರಡಬಹುದು.
ವ್ಯಕ್ತಿ: ಓಕೆ ಸರ್ (ಎಂದು ಕೈಯಲ್ಲಿ ಟೀ ಕಪ್ ಹಿಡಿದೇ ಹೊರಡುತ್ತಾರೆ)
ಪಾಕ್ ಸೇನೆ: ಕಪ್ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ..?(ಎಂದು ಆತನ ಕೈಯಲ್ಲಿದ್ದ ಟೀ ಕಪ್ ಅನ್ನು ಕಿತ್ತುಕೊಳ್ಳುತ್ತಾರೆ)
ಈ ಬಾರಿ ಪಾಕಿಸ್ತಾನವೇ ವಿಶ್ವಕಪ್ ಗೆಲ್ಲಿದೆ ಎಂಬರ್ಥದಲ್ಲಿ ಈ ಜಾಹೀರಾತು ಮಾಡಲಾಗಿದ್ದು, ಜೂನ್ 16 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ.
ಪಾಕಿಸ್ತಾನಕ್ಕೆ ಟೀ ಕಪ್ ಅಲ್ಲದೆ ಬೇರೆ ಕಪ್ ಪಡೆಯೋಕೆ ಸಾಧ್ಯವಿಲ್ಲ ಅನ್ನೋದು ಅವರಿಗೂ ಗೊತ್ತಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡಲಾಗುತ್ತಿದೆ. ಜೊತೆಗೆ ಅಭಿನಂದನ್ ಅವರ ವ್ಯಕ್ತಿತ್ವಕ್ಕೆ ಘಾಸಿಯಾಗುವಂಥ ಜಾಹೀರಾತು ಹೊರತಂದ ಪಾಕಿಸ್ತಾನದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.












Click it and Unblock the Notifications