12 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ 150 ಸೀಟು, ಉಳಿದೆಡೆ ಮೈತ್ರಿ ಅನಿವಾರ್ಯ: ಚಿದಂಬರಂ
ನವದೆಹಲಿ, ಜುಲೈ 23: ಮುಂಬರುವ ಲೋಕಸಭೆ ಚುನಾವಣೆಯಲ್ಲಿ 12 ರಾಜ್ಯಗಳಲ್ಲಿ ಕನಿಷ್ಠ 150 ಸೀಟುಗಳನ್ನು ಗೆಲ್ಲುವಷ್ಟು ಕಾಂಗ್ರೆಸ್ ಶಕ್ತವಾಗಿದೆ. ಅಗತ್ಯ ಸಂಖ್ಯೆಯ ಸದಸ್ಯರನ್ನು ಪಡೆಯಲು ಉಳಿದ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಭಾನುವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚಿದಂಬರಂ, ಸಾಧ್ಯವಾದಷ್ಟೂ ಹೆಚ್ಚು ಪಕ್ಷಗಳ ಜತೆಗೆ ಕಾಂಗ್ರೆಸ್ ಮೈತ್ರಿ ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಜತೆಗೆ, 12 ರಾಜ್ಯಗಳಲ್ಲಿ ಸೀಟುಗಳನ್ನು ಗರಿಷ್ಠಮಟ್ಟದಲ್ಲಿ ಪಡೆದುಕೊಳ್ಳಲು ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.
ಚಿದಂಬರಂ ಅವರ ಮಾತುಗಳನ್ನು ಅನೇಕ ಮುಖಂಡರು ಅನುಮೋದಿಸಿದರು. ಇನ್ನು ಕೆಲವರು ಮೈತ್ರಿಕೂಟದ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳಬೇಕು ಮತ್ತು ರಾಹುಲ್ ಗಾಂಧಿ ಅದರ ನಾಯಕತ್ವ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಾದೇಶಿಕ ಪಕ್ಷಗಳ ನಡುವೆ ಹಾಗೂ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಮೈತ್ರಿ ಹೊಂದುವುದು ಅಗತ್ಯ. ಜನರು ಈಗ ಕಾಂಗ್ರೆಸ್ ಬಗ್ಗೆ ನಂಬಿಕೆ ಗಳಿಸುತ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಪಾದಿಸಿದರು.
ಪಕ್ಷದ ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್ ಮತ್ತು ಜನಾರ್ದನ ದ್ವಿವೇದಿ ಅವರಿಗೆ ಆಹ್ವಾನ ನೀಡಲಾಗಿದ್ದರೂ ಅವರು ಸಭೆಗೆ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.












Click it and Unblock the Notifications