ಮಹಾತ್ಮಾ ಗಾಂಧಿ ಬ್ರಿಟಿಷ್ ಏಜೆಂಟ್ : ಕಾಡ್ಜು
ನವದೆಹಲಿ, ಮಾ.10: ಬ್ರಿಟಿಷರ ದಾಸ್ಯದಿಂದ ಭಾರತೀಯರಿಗೆ ಮುಕ್ತಿ ದೊರಕಿಸಿಕೊಟ್ಟು ಮಹಾತ್ಮ ಎಂದೆನಿಸಿಕೊಂಡ ಮೋಹನದಾಸ ಕರಮಚಂದ್ ಗಾಂಧೀ ಅವರನ್ನು 'ಬ್ರಿಟಿಷರ ಏಜೆಂಟ್' ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕೆಂಡೇಯ ಕಾಡ್ಜು ಹೇಳಿದ್ದಾರೆ.
ಕಾಡ್ಜು ಅವರ ತಮ್ಮ ಬ್ಲಾಗಿನ ಇತ್ತೀಚಿನ ಲೇಖನದಲ್ಲಿ ಮಹಾತ್ಮಾ ಗಾಂಧೀಜಿ ಅವರು ಬ್ರಿಟಿಷರ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಡ್ಜುರವರ ವಿವಾದಿತ ಹೇಳಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ಉಂಟು ಮಾಡಿದೆ. ಗಾಂಧಿ ಅನುಯಾಯಿಗಳು ಕಾಡ್ಜು ವಿರುದ್ಧ ಕಿಡಿಕಾರಿದ್ದು, ಕೂಡಲೇ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ತಮ್ಮ ಬ್ಲಾಗ್‌ನಲ್ಲಿ ಗಾಂಧೀಜಿ ವಿರುದ್ಧ ಕಿಡಿಕಾರಿರುವ ಕಡ್ಜು, ನಾನು ಈ ಮಾತನ್ನು ಪ್ರಜ್ಞಾಪೂರ್ವಕವಾಗಿ ಹೇಳುತ್ತಿದ್ದೇನೆ. ಗಾಂಧೀಜಿಯವರು ಬ್ರಿಟಿಷರ ಏಜೆಂಟರ್ ಆಗಿದ್ದರು. ನನ್ನ ಈ ಹೇಳಿಕೆ ಕೆಲವರಿಗೆ ನೋವು ಉಂಟು ಮಾಡಬಹುದು. ಆದರೆ, ಇದು ಸತ್ಯ ಎಂದು ಸಮರ್ಥನೆ ನೀಡಿದ್ದಾರೆ.

ಭಾರತದ ರಾಜಕಾರಣದಲ್ಲಿ ಧರ್ಮ ಸೇರ್ಪಡೆ ಮಾಡಿದ್ದು ಗಾಂಧೀಜಿ, ಧರ್ಮ ಹಾಗೂ ರಾಜಕೀಯ ಬೆರೆಯದಂತೆ ತಡೆಯಲು ಹಲವು ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೆ ಗಾಂಧೀಜಿ ಬ್ರಿಟಿಷರಂತೆ ಒಡೆದಾಳುವ ನೀತಿಯನ್ನೇ ಅನುಸರಿಸಿದ್ದರಿಂದ ಇದು ಇಂದಿಗೂ ದೇಶ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿ ಅನೇಕ ಧರ್ಮಗಳು, ಜಾತಿಗಳಿವೆ. ನಾನು ಸನಾತನ ಧರ್ಮವನ್ನು ನಂಬುತ್ತೇನೆ. ನನಗೆ ವರ್ಣಾಶ್ರಮದಲ್ಲಿ ನಂಬಿಕೆ ಇದೆ. ಗೋವುಗಳನ್ನು ಸಂರಕ್ಷಣೆ ಮಾಡಲು ದೇಶದಲ್ಲಿ ಕಾನೂನಿನ ಅಗತ್ಯವಿದೆ ಎಂದು ಹಿಂದೂ ಭಜನ್ ಸಮ್ಮೇಳನದಲ್ಲಿ ಗಾಂಧೀಜಿ ಹೇಳಿದ್ದರು. ಹೀಗಾಗಿ ಅವರನ್ನು ಜಾತ್ಯಾತೀತ ನಾಯಕ ಎನ್ನಲಾಗುವುದಿಲ್ಲ.
ಜಮೀನ್ದಾರರ ಪರವಾಗಿದ್ದ ಗಾಂಧೀಜೀ: ಮಹಾತ್ಮ ಗಾಂಧೀಜಿ ಅವರನ್ನು ಬಡವರು, ದೀನದಲಿತರ ಪರ ಎಂದು ಎಲ್ಲರೂ ನಂಬಿಕೊಂಡಿದ್ದಾರೆ. ಜಮೀನುದಾರರು, ಹಣವುಳ್ಳವರ ಪರವಾಗಿ ಬ್ರಿಟಿಷರ ಬಳಿ ಲಾಬಿ ಮಾಡಿದ್ದರು. ಚರಕ ಬಳಸಿ ಎಂದು ಕರೆ ನೀಡಿ ದೇಶದ ಜನತೆಯನ್ನು ಇನ್ನಷ್ಟು ದಾಸ್ಯಕ್ಕೆ ದೂಡಿದರು. ಇದರಿಂದಾಗಿ ಕೈಗಾರಿಕೆಗಳ ವಿರುದ್ಧವಾದ ನೀತಿ ಅನುಸರಿಸಿದರು ಎಂಬ ಮಾತಿಗೆ ಸ್ಪಷ್ಟನೆ ಇಲ್ಲ. ಚರಕವನ್ನು ಬಳಸಲು ಕರೆ ನೀಡಿ ಪರೋಕ್ಷವಾಗಿ ಉದ್ಯಮಿಗಳಿಗೆ ಲಾಭ ತಂದರು.
ಈ ಹಿಂದೆ ರಾಷ್ಟ್ರಪತಿ ಹುದ್ದೆಗೆ ಸಿನಿತಾರೆ ಕತ್ರೀನಾ ಕೈಫ್ ಸೂಕ್ತ ವ್ಯಕ್ತಿ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದ ಕಾಡ್ಜು ಅವರು ಈಗ ಮಹಾತ್ಮಾ ಗಾಂಧಿಜೀ ಇತಿಹಾಸದ ಬುಡಕ್ಕೆ ಕೈ ಇಟ್ಟಿದ್ದಾರೆ.ಈ ವಿವಾದಿತ ಹೇಳಿಕೆ ಎಲ್ಲಿಗೆ ಹೋಗಿ ಮುಟ್ಟುವುದೋ ಕಾದು ನೋಡಬೇಕಿದೆ.
ಒನ್ ಇಂಡಿಯಾ ಸುದ್ದಿ












Click it and Unblock the Notifications