ಅಸಾರಾಂ ಪರ ಸ್ವಾಮಿ ವಾದಿಸಿದರೂ 'ಜಾಮೀನು' ಸಿಗಲಿಲ್ಲ
ನವದೆಹಲಿ, ಜೂ.20: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಅವರಿಗೆ ಮತ್ತೆ ಹಿನ್ನೆಡೆಯಾಗಿದೆ. ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಅವರು ಬಾಪು ಪರ ವಾದಿಸಿದರೂ ಜೋಧಪುರ್ ನ ಕೋರ್ಟ್ ಶನಿವಾರ ಬಾಪು ಜಾಮೀನು ಅರ್ಜಿ ತಿರಸ್ಕರಿಸಿದೆ.
ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಸಲ್ಮಾನ್ ಖುರ್ಷಿದ್ ಅವರು ಈ ಹಿಂದೆ ಅಸಾರಾಂ ಬಾಪು ಪರ ವಾದಿಸಿ ವಿಫಲರಾಗಿದ್ದರು. ಅದರೆ, ಸುಬ್ರಮಣ್ಯ ಸ್ವಾಮಿ ತಮ್ಮ ವಕೀಲಿಕೆಯನ್ನು ಮುಂದುವರೆಸುತ್ತಾ ಬಾಪು ಪರ ಸಮರ್ಥ ವಾದ ಮಂಡಿಸಿದರು.
ಅದರೆ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾ. ಮನೋಜ್ ಕುಮಾರ್ ವ್ಯಾಸ್ ಅವರು ವಾದವನ್ನು ತಳ್ಳಿ ಹಾಕಿ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ. [ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']

73 ವರ್ಷ ವಯಸ್ಸಿನ ಅಸಾರಾಂ ಬಾಪು ಅವರು 2013ರಲ್ಲಿ ಎಸಗಿದ ಈ ಕೃತ್ಯಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಬಾಪು ವಿರುದ್ಧ ತಿರುಚಿದ ದಾಖಲೆಗಳು ಅಥವಾ ಷಡ್ಯಂತ್ರ ಕಂಡು ಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆಯ ವಯಸ್ಸು ಹಾಗೂ ಕ್ರೈಂ ನಡೆದ ರೀತಿಯನ್ನು ಪರಿಗಣಿಸಿ ಜಾಮೀನು ತಿರಸ್ಕರಿಸಬೇಕು ಎಂದು ಪ್ರಾಸಿಕ್ಯೂಷನ್ ಕೌನ್ಸೆಲ್ ಪಿಸಿ ಸೋಲಂಕಿ ಮಂಡಿಸಿದ ವಾದಕ್ಕೆ ಮನ್ನಣೆ ಸಿಕ್ಕಿದೆ. ಈ ಹಿಂದೆ ಕೂಡಾ ಇದೇ ಕೋರ್ಟಿನಿಂದ ಎರಡು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಒಟ್ಟಾರೆ ಆರು ಬಾರಿ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. [ಅಸಾರಾಮ್ ಬಾಪುಗೇಕೆ ಜಾಮೀನು ನೀಡಬೇಕು?: ಸುಪ್ರೀಂ]
ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಸಾರಾಂ ಬಾಪು ಬಂಧನಕ್ಕೊಳಗಾಗಿದ್ದಾರೆ. ಹೈಕೋರ್ಟ್, ಸುಪ್ರೀಂಕೋರ್ಟಿನಲ್ಲೂ ಜಾಮೀನು ಸಿಕ್ಕಿಲ್ಲ. (ಪಿಟಿಐ)












Click it and Unblock the Notifications