ಬಜೆಟ್ ಸಂಬಂಧ 15 ರಾಜ್ಯಗಳಿಗೆ ಹಣಕಾಸು ಸಚಿವರ ಭೇಟಿ
ನವದೆಹಲಿ, ಫೆಬ್ರುವರಿ 02: ಸೋಮವಾರವಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಬಜೆಟ್ ಪರ, ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದ್ದು, ಈ ಬಜೆಟ್ ಕುರಿತು ಇನ್ನಷ್ಟು ವಿವರಣೆ ನೀಡಲು ಸೀತಾರಾಮನ್ ಅವರು ಹದಿನೈದು ರಾಜ್ಯಗಳಿಗೆ ಭೇಟಿ ನೀಡಿ ಸಭೆ ನಡೆಸಲಿರುವುದಾಗಿ ತಿಳಿದುಬಂದಿದೆ.
ಸೀತಾರಾಮನ್ ಹದಿನೈದು ರಾಜ್ಯಗಳಲ್ಲಿ ಸಭೆ ನಡೆಸಿ ಬಜೆಟ್ ಕುರಿತು ವಿವರಿಸುವುದಾಗಿ ತಿಳಿದುಬಂದಿದೆ. ಫೆಬ್ರುವರಿ 4 ಹಾಗೂ 5ರದು ದೇಶದ ಆರ್ಥಿಕ ರಾಜಧಾನಿ ಎಂದೇ ಕರೆಸಿಕೊಂಡಿರುವ ಮುಂಬೈಗೆ ಮೊದಲು ಭೇಟಿ ನೀಡಲಿದ್ದು, ಅಲ್ಲಿನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿರುವರು.
ನಿರ್ಮಲಾ ಸೀತಾರಾಮನ್ ಅವರ ಹದಿನೈದು ರಾಜ್ಯಗಳ ಭೇಟಿ ಸಂಬಂಧಿ ಕಾರ್ಯಕ್ರಮ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಈ ಭೇಟಿ ಕೈಗೊಳ್ಳಲಾಗಿರುವುದಾಗಿ ತಿಳಿದುಬಂದಿದೆ.

ಮುಂಬೈ ನಂತರ ಫೆಬ್ರುವರಿ 11ರಂದು ತೆಲಂಗಾಣಕ್ಕೆ ಭೇಟಿ ನೀಡಿ, ಎರಡು ದಿನಗಳ ನಂತರ ತಮಿಳುನಾಡಿನ ವಿಲ್ಲುಪುರಂಗೆ ಪ್ರವಾಸ ಕೈಗೊಳ್ಳಲಿರುವರು. ಇವೆಲ್ಲದರ ನಂತರ ಫೆಬ್ರುವರಿ 2ನೇ ವಾರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಾಲ್ಕು ಸಭೆಗಳನ್ನು ನಡೆಸಲು ಉದ್ದೇಶಿಸಿರುವುದಾಗಿ ತಿಳಿದುಬಂದಿದೆ. ಹಂತ ಹಂತವಾಗಿ ಹದಿನೈದು ರಾಜ್ಯಗಳಿಗೆ ಭೇಟಿ ನೀಡಿ ಬಜೆಟ್ ಬಗ್ಗೆ ಚರ್ಚಿಸಲಿರುವರು ಎನ್ನಲಾಗಿದೆ.












Click it and Unblock the Notifications