ನಿರ್ಭಯಾ ಅತ್ಯಾಚಾರ: ವಿನಯ್ ಶರ್ಮಾ ಕ್ಷಮಾದಾನ ಅರ್ಜಿ ತಿರಸ್ಕೃತ
ನವದೆಹಲಿ, ಫೆಬ್ರವರಿ 1: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಎರಡನೆಯ ಕ್ಷಮಾದಾನದ ಅರ್ಜಿಯನ್ನು ಕೂಡ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ.
ಮುಕೇಶ್ ಸಿಂಗ್ ಬಳಿಕ ಅಪರಾಧಿ ವಿನಯ್ ಶರ್ಮಾ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಶನಿವಾರ ಅದನ್ನು ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್, ಆತನ ಮನವಿಯನ್ನು ತಿರಸ್ಕರಿಸಿದರು. ಇದರಿಂದ ವಿನಯ್ ಶರ್ಮಾಗೆ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇದ್ದ ಕೊನೆಯ ಅವಕಾಶ ಕೂಡ ಕೈತಪ್ಪಿದೆ.
ಫೆ. 1ರಂದು ಎಲ್ಲ ನಾಲ್ಕು ಅಪರಾಧಿಗಳ ಗಲ್ಲುಶಿಕ್ಷೆ ಜಾರಿ ನಿಗದಿಯಾಗಿತ್ತು. ಅದಕ್ಕೆ ಎರಡು ದಿನಗಳ ಮುಂಚೆಯಷ್ಟೇ ವಿನಯ್ ಶರ್ಮಾ (26) ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ.

ಪ್ರಕರಣದ ಅತಿ ಹಿರಿಯ ಅಪರಾಧಿ ಮುಕೇಶ್ ಶರ್ಮಾ (31) ಸಲ್ಲಿಸಿದ್ದ ಕ್ಯುರೇಟಿವ್ ಮತ್ತು ಕ್ಷಮಾದಾನದ ಅರ್ಜಿ ವಜಾಗೊಂಡಿತ್ತು. ಕ್ಷಮಾದಾನದ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈಗ ಆತನ ಬಳಿ ಯಾವುದೇ ಕಾನೂನು ಅವಕಾಶವಿಲ್ಲ.
ವಿನಯ್ ಶರ್ಮಾ ಕ್ಷಮಾದಾನದ ಅರ್ಜಿ ತಿರಸ್ಕೃತವಾಗಿರುವುದರಿಂದ ಆತ ಕೂಡ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಹಾಗೆಯೇ ಮತ್ತೊಬ್ಬ ಅಪರಾಧಿ ಅಕ್ಷಯ್ ಸಿಂಗ್ ಕ್ಯುರೇಟಿವ್ ಅರ್ಜಿ ವಜಾಗೊಂಡಿದ್ದು, ಆತನೂ ಕ್ಷಮಾದಾನದ ಅರ್ಜಿ ಸಲ್ಲಿಸಬಹುದು.












Click it and Unblock the Notifications