ನಿರ್ಭಯಾ ಕೇಸ್ ಅಪರಾಧಿಗೆ ವಿಷವುಣಿಸಿದ್ದರು: ವಕೀಲ ಆರೋಪ
ನವದೆಹಲಿ, ಜನವರಿ 25: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಮ್ಮ ಕ್ಷಮಾದಾನದ ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್, ಮತ್ತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯಾದ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಜ.17ರಂದು ತಿರಸ್ಕರಿಸಿದ್ದರು.
ಎಲ್ಲ ನಾಲ್ವರೂ ಅಪರಾಧಿಗಳನ್ನು ನ್ಯಾಯಾಲಯದ ಆದೇಶದಂತೆ ಫೆ. 1ರ ಬೆಳಿಗ್ಗೆ ಆರು ಗಂಟೆಗೆ ಗಲ್ಲಿಗೆ ಏರಿಸಲು ಸಿದ್ಧತೆ ನಡೆಸಲಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಅಪರಾಧಿಗಳು ಕಾನೂನಿನ ಅಡಿ ಇರುವ ಅಂತಿಮ ಅವಕಾಶಗಳನ್ನು ಒಬ್ಬೊಬ್ಬರಾಗಿ ಬಳಸಿಕೊಳ್ಳುತ್ತಿರುವುದರಿಂದ ಗಲ್ಲುಶಿಕ್ಷೆ ಜಾರಿಯು ಎರಡನೆಯ ಬಾರಿ ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ದೂರಿದ್ದ ಎಪಿ ಸಿಂಗ್
ಅಪರಾಧಿಗಳಾದ ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಸಿಂಗ್ ಇಬ್ಬರೂ ಸುಪ್ರೀಂಕೋರ್ಟ್‌ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕಿದ್ದು, ಅದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಲು ತಿಹಾರ್ ಜೈಲಿನ ಅಧಿಕಾರಿಗಳು ವಿಳಂಬಮಾಡುತ್ತಿದ್ದಾರೆ ಎಂದು ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ದೆಹಲಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮತ್ತೆ ನಿರ್ದೇಶನ ನೀಡಲಾಗದು
ಈ ಅರ್ಜಿಯನ್ನು ಶನಿವಾರ ವಿಚಾರಣೆಗೆ ಒಳಪಡಿಸಿದ ದೆಹಲಿ ಪಟಿಯಾಲ ಹೌಸ್ ನ್ಯಾಯಾಲಯ, ಕ್ಷಮಾದಾನ ಮತ್ತು ಕ್ಯುರೇಟಿವ್ ಅರ್ಜಿಗಳನ್ನು ಸಲ್ಲಿಸಲು ಕೆಲವು ದಾಖಲೆಗಳನ್ನು ನೀಡುವ ಸಂಬಂಧ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿತು.

ಬೇಕೆಂದೇ ಆಟವಾಡುತ್ತಿದ್ದಾರೆ
ತಿಹಾರ್ ಜೈಲು ಅಧಿಕಾರಿಗಳ ಪರ ಹಾಜರಾಗಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್, ವಕೀಲರು ಕೇಳಿರುವ ಎಲ್ಲ ಸಂಬಂಧಿತ ದಾಖಲೆಗಳನ್ನೂ ಈಗಾಗಲೇ ಒದಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ರೀತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಮರಣದಂಡನೆ ಜಾರಿಯಾಗುವುದನ್ನು ವಿಳಂಬ ಮಾಡುವ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ. ಇಡೀ ಪ್ರಕ್ರಿಯೆಯು ಕಾನೂನನ್ನು ಸೋಲಿಸುವ ಸಲುವಾಗಿ ನಡೆಯುತ್ತಿದೆ. ಅವರು ಈಗಾಗಲೇ ಎಲ್ಲ ದಾಖಲೆಗಳನ್ನೂ ಒದಗಿಸಿದ್ದಾರೆ ಎಂದು ಅವರು ವಿವರಿಸಿದರು.

ವಿಷ ಉಣಿಸುತ್ತಿದ್ದಾರೆ
ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮಾನಿಗೆ ನಿಧಾನವಾಗಿ ವಿಷವುಣಿಸಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಮಗೆ ಅವರ ವೈದ್ಯಕೀಯ ವರದಿಯನ್ನು ನೀಡುತ್ತಿಲ್ಲ ಎಂದು ಎಪಿ ಸಿಂಗ್ ಆರೋಪಿಸಿದ್ದಾರೆ.

ಜೈಲಿನಲ್ಲಿಯೇ ಪೇಂಟಿಂಗ್ ಮಾಡಿದ್ದಾರೆ
ಜೈಲು ಅಧಿಕಾರಿಗಳು ಶುಕ್ರವಾರ ರಾತ್ರಿ ತಮಗೆ ಕೆಲವು ದಾಖಲೆಗಳನ್ನು ನೀಡಿದ್ದಾರೆ. ಆದರೆ ವಿನಯ್‌ನ ಖಾಸಗಿ ಡೈರಿ ಮತ್ತು ವೈದ್ಯಕೀಯ ದಾಖಲೆಗಳನ್ನು ನೀಡಿಲ್ಲ ಎಂದಿದ್ದಾರೆ. 'ತಿಹಾರ್ ಅಧಿಕಾರಿಗಳು ತಮ್ಮ ಬಳಿ ಅಂತಹ ಯಾವುದೇ ದಾಖಲೆ ಇಲ್ಲ ಎನ್ನುತ್ತಾರೆ. ವಿನಯ್‌ಗೆ ನಿಧಾನ ವಿಷ ಉಣಿಸಲಾಗುತ್ತಿತ್ತು. ಹೀಗಾಗಿಯೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿನಯ್ ಅನೇಕ ಪೇಂಟಿಂಗ್‌ಗಳನ್ನು ಮಾಡಿದ್ದಾನೆ. ಅದನ್ನು ರಾಷ್ಟ್ರಪತಿ ಅವರಿಗೆ ತಿಳಿಸಬೇಕಿತ್ತು. ಆತ ಆ ಪೇಂಟಿಂಗ್‌ಗಳಿಂದ ಹಣವನ್ನೂ ಸಂಪಾದಿಸಿದ್ದಾನೆ. ಅದನ್ನು ಕೂಡ ಅವರಿಗೆ ಮಾಹಿತಿ ನೀಡಬೇಕಿತ್ತು ಎಂದು ಹೇಳಿದ್ದಾರೆ.












Click it and Unblock the Notifications