ಮೋದಿ ನೇತೃತ್ವದ ಸರಕಾರ ಎಲ್ಲ ಮಿತಿಯನ್ನೂ ಮೀರಿದೆ: ಮನ್ ಮೋಹನ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 10 : "ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎಲ್ಲ ಮಿತಿಗಳನ್ನು ಮೀರಿದೆ" ಎಂದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಸೋಮವಾರ ಹೇಳಿದರು. ವಿಪಕ್ಷಗಳು ನೀಡಿರುವ ಭಾರತ್ ಬಂದ್ ನಲ್ಲಿ ಸೋಮವಾರ ಅವರು ಮಾತನಾಡಿದರು.
"ನರೇಂದ್ರ ಮೋದಿ ಸರಕಾರ ಸಾಕಷ್ಟು ಮಾಡಿದೆ, ಅವೆಲ್ಲ ದೇಶದ ಹಿತಾಸಕ್ತಿಯಿಂದ ಅಲ್ಲ ಮತ್ತು ಇದೀಗ ಎಲ್ಲ ಮಿತಿ ಮೀರಿದೆ" ಎಂದು ಹೇಳಿದ ಅವರು, ರೈತರನ್ನು ಬೆಂಬಲಿಸಲು ಈ ಸರಕಾರ ವಿಫಲವಾಗಿದೆ ಎಂಬ ಆರೋಪ ಮಾಡಿದರು.
ದೇಶದ ಒಗ್ಗಟ್ಟು ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ನಾವೆಲ್ಲ ಒಟ್ಟಾಗಿದ್ದೇವೆ ಎಂದು ಅವರು ಹೇಳಿದರು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಎರಡು ಅವಧಿಗೆ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.

ಕಾಂಗ್ರೆಸ್ ನೇತೃತ್ವದಲ್ಲಿ ಕನಿಷ್ಠ ಇಪ್ಪತ್ತೊಂದು ಪಕ್ಷಗಳು ಭಾರತ್ ಬಂದ್ ನಲ್ಲಿ ಭಾಗವಹಿಸಿವೆ. ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಹಾಗೂ ಡಾಲರ್ ವಿರುದ್ಧ ಕುಸಿಯುತ್ತಿರುವ ರುಪಾಯಿ ಮೌಲ್ಯದ ವಿರುದ್ಧ ಬಂದ್ ಗೆ ಕರೆ ನೀಡಲಾಗಿದೆ.
ಇಂಥ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ವಿರೋಧ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ತೊರೆದು ಒಟ್ಟಾಗಬೇಕು ಎಂದು ಮನ್ ಮೋಹನ್ ಸಿಂಗ್ ಕರೆ ನೀಡಿದ್ದಾರೆ. ಅಪನಗದೀಕರಣ, ಉದ್ಯೋಗ ಸೃಷ್ಟಿ ಆಗದಿರುವ ಬಗ್ಗೆ ಕಳೆದ ವಾರ ಕೂಡ ಅವರು ಪ್ರಶ್ನೆ ಮಾಡಿದ್ದರು.












Click it and Unblock the Notifications