ಕೇಜ್ರಿವಾಲ್ ಭೇಟಿಗೆ ಬಂದ ಮೌಲ್ವಿಯ ಜೇಬಲ್ಲಿ ಬುಲೆಟ್, ಆತ ಅರೆಸ್ಟ್
ನವದೆಹಲಿ, ನವೆಂಬರ್ 27 : ಜೀವಂತ ಬುಲೆಟ್ ಸಮೇತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಬಂದಿದ್ದ 39 ವರ್ಷದ ಮುಸ್ಲಿಂ ಮೌಲ್ವಿಯನ್ನು ಬಂಧಿಸಲಾಗಿದೆ. ಆತ ಮೌಲ್ವಿಗಳ ನಿಯೋಗದೊಂದಿಗೆ ಬಂದಿದ್ದ.
ಇದು ಎರಡನೇ ಬಾರಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಭದ್ರತಾ ಸಿಬ್ಬಂದಿಯಿಂದ ಲೋಪವಾಗಿರುವುದು. ಕೆಲ ದಿನಗಳ ಹಿಂದೆ ನವೆಂಬರ್ 20ರಂದು ಅರವಿಂದ್ ಅವರನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿಯೊಬ್ಬ ಚೀಟಿ ಕೊಡುವ ನೆಪದಲ್ಲಿ ಅರವಿಂದ್ ಅವರ ಮುಖಕ್ಕೆ ಕೆಂಪು ಮೆಣಸಿನ ಪುಡಿಯನ್ನು ಹಚ್ಚಿದ್ದ.
ವಕ್ಫ್ ಮಂಡಳಿಯಿಂದ ಮೌಲ್ವಿಗಳಿಗೆ ನೀಡಲಾಗುತ್ತಿರುವ ಸಂಬಳವನ್ನು ಹೆಚ್ಚಿಸಬೇಕೆಂಬ ಆಗ್ರಹದೊಂದಿಗೆ 'ಜನತಾ ದರ್ಬಾರ್'ದಲ್ಲಿ ಕೇಜ್ರಿವಾಲ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಹೋಗಿದ್ದ ಮೌಲ್ವಿಗಳ ಗುಂಪಿನಲ್ಲಿ ಮೊಹಮ್ಮದ್ ಇಮ್ರಾನ್ ಕೂಡ ಇದ್ದ.

ತಪಾಸಣೆ ಮಾಡುತ್ತಿದ್ದಾಗ ಮೊಹಮ್ಮದ್ ಇಮ್ರಾನ್ ಜೇಬಿನಲ್ಲಿ ಬುಲೆಟ್ ಇರುವುದು ಭದ್ರತಾ ಸಿಬ್ಬಂದಿಗೆ ತಿಳಿದುಬಂದಿದೆ. ಬಾವ್ಲಿ ವಾಲಿ ಮಸೀದಿಯನ್ನು ನಿರ್ವಹಿಸುತ್ತಿರುವ ಮೊಹಮ್ಮದ್ ಇಮ್ರಾನ್ ನನ್ನು ಆಯುಧ ಕಾಯ್ದೆ ಅಡಿಯಲ್ಲಿ ಕೂಡಲೆ ಬಂಧಿಸಲಾಯಿತು.
ಕೆಲದಿನಗಳ ಹಿಂದೆ ಮಸೀದಿಯ ಕಾಣಿಕೆ ಡಬ್ಬಿಯಲ್ಲಿ ಬುಲೆಟ್ ಸಿಕ್ಕಿತ್ತು. ಅದನ್ನು ಜೇಬಿನಲ್ಲಿಟ್ಟು ಹಾಗೆಯೇ ಮರೆತುಬಿಟ್ಟಿದ್ದೆ. ಅದನ್ನು ಯಮುನಾ ನದಿಯಲ್ಲಿ ಎಸೆಯಬೇಕೆಂದುಕೊಂಡಿದ್ದೆ, ಆದರೆ ಜೇಬಿನಲ್ಲಿಯೇ ಉಳಿಸಿಕೊಂಡೆ ಎಂದು ಆತ ಸಬೂಬು ಹೇಳಿದ್ದಾನೆ.
ಮೆಣಸಿನ ಪುಡಿಯನ್ನು ಎರಚಿದ ಪ್ರಸಂಗ ನಡೆದ ನಂತರ ತಮ್ಮ ಪ್ರಾಣಕ್ಕೆ ಅಪಾಯವಿದೆ, ತಮ್ಮನ್ನು ಹತ್ಯೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದರು. ಈ ಘಟನೆ ನಡೆದ ನಂತರ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾಗಿರುವ ಭದ್ರತೆಯ ಮೇಲೆ ಸಂಶಯ ಏಳುವಂತೆ ಮಾಡಿದೆ.

ಮೆಣಸಿನ ಪುಡಿಯನ್ನು ಎರಚಿರುವ ಘಟನೆಯ ಹಿಂದೆ ಭಾರತೀಯ ಜನತಾ ಪಕ್ಷದ ಕೈವಾಡವಿದೆ. ಆಮ್ ಆದ್ಮಿ ಪಕ್ಷ ಮಾಡಿರುವ ಅತ್ಯುತ್ತಮ ಕೆಲಸವನ್ನು ಸಹಿಸದ ಕೆಲ ಬಿಜೆಪಿ ನಾಯಕರು ತಮ್ಮ ಮೇಲೆ ಈ ರೀತಿ ದಾಳಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ತಮ್ಮನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications