ಮಂಗಳೂರಿನಿಂದ ವಿವಿಧೆಡೆ ಹೆಚ್ಚುವರಿ ವಿಮಾನ : ಕೇಂದ್ರದ ಭರವಸೆ
ನವದೆಹಲಿ, ಡಿಸೆಂಬರ್ 20 : ಕುವೈತ್ ಮತ್ತು ಮಂಗಳೂರು ನಡುವೆ ಸಂಚರಿಸುವ ವಿಮಾನದ ವೇಳಾಪಟ್ಟಿಯ ಸಮಸ್ಯೆಯನ್ನು ಪರಿಹರಿಸುವಂತೆ ಮತ್ತು ಮಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಹೆಚ್ಚುವರಿ ವಿಮಾನ ನೀಡುವಂತೆ ಆಗ್ರಹಿಸಿ ಕೇಂದ್ರ ವಿಮಾನ ಯಾನ ಸಚಿವರೊಂದಿಗೆ ಚರ್ಚಿಸಲಾಯಿತು.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ವಿಮಾನ ಯಾನ ಖಾತೆಯ ಕಾರ್ಯದರ್ಶಿ ಉಷಾ ಪಧಿ ಅವರೊಂದಿಗೆ ಚರ್ಚಿಸಿದರು. ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರ ನಿರ್ದೇಶನದಂತೆ ನಡೆದ ಈ ಸಭೆಯಲ್ಲಿ ವಿಮಾನ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾಗಳು ಭಾಗವಹಿಸಿದ್ದವು.
ಸಭೆಯಲ್ಲಿ ಮಂಗಳೂರಿನಿಂದ ನವದೆಹಲಿ, ಮುಂಬೈ, ಬೆಂಗಳೂರು, ತಿರುವನಂತಪುರಂ, ಪಣಜಿ (ಗೋವಾ) ಹಾಗೂ ಪುಣೆ ಮಧ್ಯೆ ವಿಶೇಷ ವಿಮಾನ ಹೊರಡಿಸುವ ಕುರಿತು ಚರ್ಚಿಸಲಾಯಿತು. ಇದಕ್ಕೆ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ವಿಮಾನ ಸಂಸ್ಥೆಗಳ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

ಇದಲ್ಲದೇ ಸಂಸದರು ಮಂಗಳೂರು-ಕುವೈತ್ ಮಧ್ಯೆ ಸಂಚರಿಸುವ ವಿಮಾನದ ವೇಳಾಪಟ್ಟಿಯ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಗಳಿಗೆ ಸೂಚಿಸಿದರು. ಸಂಸದರ ಸೂಚನೆಗೆ ಸ್ಪಂದಿಸಿರುವ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿದ್ದಾರೆ.












Click it and Unblock the Notifications