ಮೋದಿ ಬಳಸಿದ ಅಸಾಂವಿಧಾನಿಕ ಪದವನ್ನು ಅಳಿಸಿದ ವೆಂಕಯ್ಯನಾಯ್ಡು
ನವದೆಹಲಿ, ಆಗಸ್ಟ್ 10: ಪ್ರಧಾನಿ ಮೋದಿ ಅವರು ಸಂಸತ್‌ನಲ್ಲಿ ಬಳಸಿದ ಅಸಾಂವಿಧಾನಿಕ ಪದವನ್ನು ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ಕಡತದಿಂದ ತೆಗೆದು ಹಾಕಿದ್ದಾರೆ.
ಪ್ರಧಾನಿಯೊಬ್ಬರು ಸಂಸತ್‌ನಲ್ಲಿ ಹೀಗೆ ಅಸಾಂವಿಧಾನಿಕ ಪದ ಬಳಸಿದ್ದು ಮತ್ತು ಪ್ರಧಾನಿ ಅವರು ಬಳಸಿದ ವಾಕ್ಯವನ್ನು ಅಳಿಸಿಹಾಕಿರುವುದು ವಿರಳದಲ್ಲಿ ವಿರಳ ಪ್ರಕರಣವಾಗಿದೆ.
ನಿನ್ನೆ ರಾಜ್ಯಸಭೆ ಉಪಾಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಅವರು ಆಯ್ಕೆಯಾದರು. ಅವರ ವಿರುದ್ಧ ಸ್ಪರ್ಧಿಸಿದ್ದ ಯುಪಿಎ ಬೆಂಬಲಿತ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರು ಸೋಲನ್ನಪ್ಪಿದ್ದರು.

ದ್ವಂದ್ವಾರ್ಥ ಬರುವಂತೆ ಮಾತನಾಡಿದ ಮೋದಿ
ಉಪಸಭಾಪತಿ ಸ್ಥಾನಕ್ಕೆ ಆಯ್ಕೆಯಾದ ಹರಿವಂಶ ನಾರಾಯಣ ಅವರನ್ನು ಕುರಿತು ಅಭಿನಂಧನಾ ಭಾಷಣ ಮಾಡಿದ ಮೋದಿ ಅವರು, 'ಇಬ್ಬರು ಹರಿ'ಗಳ ಮಧ್ಯೆ ಸ್ಪರ್ಧೆ ನಡೆದಿತ್ತು, ಅದರಲ್ಲಿ ಯುಪಿಎ ಬೆಂಬಲಿತ ಹರಿ ಅವರು (ಹಿಂದಿ: ಬಿಕೆಹುಯೇತೇ) ತಮ್ಮನ್ನು ತಾವು ಮಾರಿಕೊಂಡು ಬಿಟ್ಟಿದ್ದರು. ಆದರೆ ನಮ್ಮ ಅಭ್ಯರ್ಥಿ ಹಾಗಿರಲಿಲ್ಲ ಅದಕ್ಕೆ ಗೆದ್ದರು' ಎಂದು ಹೇಳಿ ವಿಕಟ ನಗೆ ನಕ್ಕಿದ್ದರು.

ಇನ್ಶಿಯಲ್ ಬಳಸಿ ದ್ವಂದಾರ್ಥ ಹುಟ್ಟಿಸಿದ್ದ ಮೋದಿ
ಬಿ.ಕೆ.ಹರಿಪ್ರಸಾದ್ ಅವರ ಪ್ರಾರಂಭಿಕ ಅಕ್ಷರಗಳನ್ನು ಬಳಸಿ (ಇನಿಷಿಯಲ್) ಉಲ್ಲೇಖಿಸಿ ಹಿಂದಿಯಲ್ಲಿ ದ್ವಂದಾರ್ಥ ಬರುವಂತೆ ಮಾತನಾಡಿದ್ದರು. ಇದನ್ನು ಅಸಾಂವಿಧಾನಿಕ ಎಂದು ಪರಿಗಣಿಸಿದ ಸಭಾಪತಿ ವೆಂಕಯ್ಯನಾಯ್ಡು ಅವರು ಮೋದಿ ಅವರ ಈ ವಾಕ್ಯವನ್ನು ಕಡತದಿಂದ ತೆಗೆದು ಹಾಕಿದ್ದಾರೆ.

ಪ್ರಧಾನಿಯೇ ಅಸಾಂವಿಧಾನಿಕ ಬಳಸಿದರೆ ಹೇಗೆ?
ಈ ಪ್ರಕರಣವನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ, ದೇಶದ ಪ್ರಧಾನಿ, ರಾಷ್ಟ್ರೀಯ ಪಕ್ಷವೊಂದರ ಮುಖಂಡ ಸಂಸತ್‌ನಲ್ಲಿ ತಾವೇ ಅಸಾಂವಿಧಾನಿಕ ಪದ ಬಳಸಿದರೆ ತಮ್ಮ ಕಿರಿಯರಿಗೆ ಅದು ನೀಡುವ ಸಂದೇಶ ಏನು ಎಂದು ಮೌಲಿಕ ಪ್ರಶ್ನೆಯನ್ನು ಎತ್ತಿದೆ.

ವೆಂಕಯ್ಯ ನಾಯ್ಡು ಅವರ ನಿಷ್ಪಕ್ಷಪಾತಕ್ಕೆ ಉದಾಹರಣೆ
ಆದರೆ ಬಿಜೆಪಿಯು ಇದನ್ನು ಬೇರೆಯದ್ದೇ ಕೋನದಿಂದ ನೋಡಿದ್ದು, ಈ ಪ್ರಕರಣವು ಸಭಾಪತಿ, ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರ ನಿಷ್ಪಕ್ಷಪಾತವನ್ನು ತೋರುತ್ತದೆ ಎಂದಿದೆ.












Click it and Unblock the Notifications