ಉತ್ತರ ಪ್ರದೇಶ ಸಂಸದರಿಗೆ ಪಾಠ ಹೇಳಿದ ಮೋದಿ, ಶಾ
ಇಂದು ಬೆಳಗ್ಗೆ ಮೋದಿಯವರ ನಿಚಾಸದಲ್ಲಿ ಉತ್ತರ ಪ್ರದೇಶದ ಸಂಸದರಿಗಾಗಿ ಏರ್ಪಡಿಸಿದ್ದ ಬ್ರೇಕ್ ಫಾಸ್ಟ್ ಮೀಟ್ ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಸಂಸದರಿಗೆ ಕೆಲವು ಮಾರ್ಗಸೂಚಿಗಳನ್ನು ಹೇಳಿದರು.
ನವದೆಹಲಿ, ಮಾರ್ಚ್ 24: 'ಯೋಗಿ ಆದಿತ್ಯನಾಥ್ ಅವರನ್ನು ಸರ್ವಾನುಮತದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆರಿಸಲಾಗಿದೆ. ಅವರಿಗೆ ನಿಮ್ಮ ಕಡೆಯಿಂದ ಯಾವುದೇ ರೀತಿಯ ಜನೋಪಯೋಗಿ ಸಲಹೆಯನ್ನು ನೀಡಬಹುದು. ಆದರೆ ಅವರ ಪ್ರಭಾವವನ್ನು ಬಳಸಿ ನಿಮ್ಮ ಸ್ವಾರ್ಥಕ್ಕಾಗಿ ಯಾವುದೇ ಕೆಲಸ ಮಾಡಿಸಿಕೊಳ್ಳಲು ಮುಂದಾಗಬೇಡಿ' ಎಂದು ಪ್ರಧಾನಿ ಮೋದಿ ಉತ್ತರ ಪ್ರದೇಶದ 71 ಸಂಸದರಲ್ಲಿ ಮನವಿ ಮಾಡಿಕೊಂಡರು.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಉತ್ತರ ಪ್ರದೇಶದ 71 ಸಂಸದರಿಗಾಗಿ ಏರ್ಪಡಿಸಿದ್ದ ಬ್ರೇಕ್ ಫಾಸ್ಟ್ ಮೀಟ್ ನಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ಸಂಸದರೂ ಕೈಜೋಡಿಸಬೇಕೆಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಇಲ್ಲಿ ಕೇವಲ ಕಾನೂನಿನ ಆಡಳಿತ ಮಾತ್ರ ನಡೆಯುತ್ತದೆ ಎಂಬುದು ನೆನಪಿರಲಿ, ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯೋಗಿಯವರಿಗೆ ಸಹಕಾರ ನೀಡಿ ಎಂದಿದ್ದಾರೆ.[ಯೋಗಿ ಆದಿತ್ಯನಾಥ್ ಅವರಿಗೆ ಮೋದಿ ಕೊಟ್ಟ 12 ಸಲಹೆಗಳು]

ಪಕ್ಷದ ಪ್ರತಿಯೊಬ್ಬರಿಗೂ 2019 ರಲ್ಲಿ ನಡೆಯಲಿರುವ ಚುನಾವಣೆಯ ಬಗ್ಗೆ ಅರಿವಿರಲಿ. ಜೊತೆಗೆ ಬಡವರ ಉದ್ಧಾರಕ್ಕೆ ಪೂರಕವಾಗುವ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ತಡಮಾಡಬೇಡಿ ಎಂದಿರುವ ಮೋದಿ, ನಿಮಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಸಮಯವೇ ಇಲ್ಲ ಎಂಬಂತೆ ಕೆಲಸ ಮಾಡಿ ಎಂದು ಸಂಸದರಿಗೆ ಸಲಹೆ ನೀಡಿದ್ದಾರೆ.[ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿದ ಯೋಗಿ ಆದಿತ್ಯನಾಥ್]
ಬ್ರೆಕ್ ಫಾಸ್ಟ್ ಮೀಟ್ ನಲ್ಲಿ ಮೋದಿ, ಶಾ ಅವರೊಂದಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ವೇದಿಕೆ ಹಂಚಿಕೊಂಡರು.












Click it and Unblock the Notifications