ಮೋದಿ ನನ್ನೊಂದಿಗೆ ರಫೇಲ್ ಬಗ್ಗೆ 20 ನಿಮಿಷ ಮಾತನಾಡಲಿ: ರಾಹುಲ್ ಸವಾಲು
ನವದೆಹಲಿ, ಜನವರಿ 02: ಸಂಸತ್‌ನಲ್ಲಿ ರಾಹುಲ್ ಗಾಂಧಿ ಅವರು ರಫೇಲ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅರುಣ್ ಜೇಟ್ಲಿ ನೀಡಿದ ಉತ್ತರಗಳ ಬಗ್ಗೆ ತಕರಾರು ಎತ್ತಿರುವ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ಪ್ರಶ್ನೆಗಳನ್ನು ಬಿಜೆಪಿ ಕಡೆ ಎಸೆದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜೇಟ್ಲಿ ಅವರಿಗೆ ಸಣ್ಣ-ಸಣ್ಣ ಮಾತುಗಳನ್ನಾಡುವ ಕಲೆ ಚೆನ್ನಾಗಿ ಒಲಿದಿದೆ. ಆದರೆ ನಾವು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡದೆ, ಸುತ್ತಿ-ಬಳಸಿ ವಿಷಯವನ್ನು ಮರೆಮಾಚುವ ಕಲೆ ಕಲಿತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಮೋದಿ ಅವರಿಗೆ ರಫೇಲ್ ಬಗ್ಗೆ ಚರ್ಚಿಸುವ ಧೈರ್ಯ ಇಲ್ಲ, ನನ್ನೊಂದಿಗೆ ಮೋದಿ ಅವರು 20 ನಿಮಿಷ ಮಾತನಾಡಲಿ ಸಾಕು ಎಂದು ಅವರು ಸವಾಲು ಹಾಕಿದರು. ನನ್ನೊಂದಿಗೆ ಬಿಡಿ ಸಂಸತ್‌ಗೆ ಬರಲು ಸಹ ಅವರಿಗೆ ಧೈರ್ಯ, ಸುದ್ದಿಗೋಷ್ಠಿ ಮಾಡುವುದಂತೂ ದೂರವೇ ಉಳಿಯಿತು ಎಂದು ರಾಹುಲ್ ವಾಗ್ದಾಳಿ ಮಾಡಿದರು.

'ಪರಿಕ್ಕರ್ ಬಳಿ ರಫೇಲ್ ಸಂಬಂಧಿಸಿದ ಕಡತ ಇದೆ'
ಇಂದು ಬಿಡುಗಡೆ ಮಾಡಿದ ಟೇಪ್ ಬಗ್ಗೆ ಮಾತನಾಡಿದ ಅವರು, ರಫೇಲ್ ಬಗ್ಗೆ ಪೂರ್ಣ ಮಾಹಿತಿಯ ಕಡತ ನನ್ನ ಬಳಿ ಇದೆ ಎಂದು ಮನೋಹರ ಪರಿಕ್ಕರ್ ಅವರು ಗೋವಾ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದ್ದಾರೆ ಎಂದು ಗೋವಾದ ಸಚಿವರೇ ಒಬ್ಬರು ಹೇಳಿದ್ದಾರೆ. ಆ ಆಡಿಯೋವನ್ನು ಪ್ಲೇ ಮಾಡಲು ನಾನು ಸಂಸತ್‌ನಲ್ಲಿ ಅವಕಾಶ ಕೇಳಿದೆ ಆದರೆ ಅದನ್ನು ನಿರಾಕರಿಸಲಾಯಿತು ಎಂದರು.

'ಪರಿಕ್ಕರ್ ಬಳಿ ಇರುವ ಕಡತದಲ್ಲಿ ಏನಿದೆ?'
ಆಡಿಯೋ ಬಗ್ಗೆ ಮುಂದುವರೆದು ಮಾತನಾಡಿದ ಅವರು, ಮಾಜಿ ರಕ್ಷಣಾ ಸಚಿವರ ಬಳಿ ಇರುವ ಕಡತ ಯಾವುದು, ಅದರಲ್ಲಿರುವ ಮಾಹಿತಿ ಯಾವುದು, ಪರಿಕ್ಕರ್ ಬಳಿ ಇರುವ ಕಡತದಲ್ಲಿ ಮೋದಿ ಅವರು ಹೆದರುವಂತ ಅಂಶಗಳು ಇವೆ. ಆ ಅಂಶಗಳು ಯಾವುವು ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

'ಮೋದಿಗೆ ಸಂಸತ್‌ಗೆ ಬರುವ ಧೈರ್ಯವಿಲ್ಲ'
ಮೋದಿ ಅವರು ಸಂಸತ್‌ಗೆ ಬರುವುದಿಲ್ಲ, ರಫೇಲ್ ಬಗ್ಗೆ ಸರ್ಕಾರದ ರಕ್ಷಣಾ ಸಚಿವರು ಸಂಸತ್‌ನಲ್ಲಿ ಮಾತನಾಡುವುದಿಲ್ಲ, ಆದರೆ ಪ್ರಕರಣದ ಜೊತೆ ಸಂಬಂಧ ಹೊಂದಿರದ ಅರುಣ್ ಜೇಟ್ಲಿ ಅವರು ತಮ್ಮ ಪ್ರಧಾನಿ ಹಾಗೂ ರಕ್ಷಣಾ ಸಚಿವರ ರಕ್ಷಣೆಗೆ ಧಾವಿಸುತ್ತಾರೆ ಇದು ಅನುಮಾನ ಮೂಡಿಸುತ್ತದೆ ಎಂದು ರಾಹುಲ್ ಹೇಳಿದರು.

'2007ರಲ್ಲೇ ಸುಸಜ್ಜಿತ ವಿಮಾನಕ್ಕೆ ಒಪ್ಪಂದವಾಗಿತ್ತು'
ಫುಲ್ಲೀ ಲೋಡೆಡ್ (ಪೂರ್ಣ ಸುಸಜ್ಜಿತ) ಯುದ್ಧ ವಿಮಾನಗಳು ಖರೀದಿ ಮಾಡುವ ಒಪ್ಪಂದ ಮಾಡಿಕೊಂಡಿರುವ ಕಾರಣ ವಿಮಾನ ದರದಲ್ಲಿ ಏರಿಕೆ ಆಗಿದೆ ಎಂದು ಜೇಟ್ಲಿ ಹೇಳುತ್ತಾರೆ ಆದರೆ, 2007 ರಲ್ಲಿ ಮೊದಲ ಒಪ್ಪಂದ ಮಾಡಿಕೊಂಡಾಗಲೇ ಪೂರ್ಣ ಸುಸಜ್ಜಿತ ಯುದ್ಧ ವಿಮಾನದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಬೆಲೆ ಕಡಿಮೆ ಇತ್ತು. ಆದರೆ ಎನ್‌ಡಿಎ ಒಪ್ಪಂದ ಮಾಡಿಕೊಂಡಾಗ ಬೆಲೆ ಹೇಗೆ ಹೆಚ್ಚಾಯಿತು ಎಂದು ಅವರು ಪ್ರಶ್ನೆ ಮಾಡಿದರು.

'ರಫೇಲ್‌ನಲ್ಲಿ ಅಕ್ರಮ ಆಗಿಲ್ಲ ಎಂದು ಸುಪ್ರಿಂ ಹೇಳಿಲ್ಲ'
ರಫೇಲ್ ಬಗ್ಗೆ ತನಿಖೆ ನಡೆಸುವುದು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆಯೇ ಹೊರತು, ರಫೇಲ್‌ನಲ್ಲಿ ಹಗರಣ ಆಗಿಯೇ ಇಲ್ಲ ಎಂದು ಸುಪ್ರಿಂ ಹೇಳಿಲ್ಲ. ಅಲ್ಲದೆ ಸುಪ್ರಿಂಕೋರ್ಟ್‌ಗೆ ಸುಳ್ಳು ಮಾಹಿತಿಯನ್ನು ಸರ್ಕಾರ ನಿಡಿರುವ ಅನುಮಾನ ಇದೆ. ಅದರ ಬಗ್ಗೆ ದೂರು ನೀಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.












Click it and Unblock the Notifications