ಅಚ್ಚರಿ ಮೂಡಿಸಿದ ಶೀಲಾ ಹೇಳಿಕೆ: ಉಗ್ರರ ವಿಚಾರದಲ್ಲಿ ಸಿಂಗ್‌ಗಿಂತ ಮೋದಿ ಬಲ
ನವದೆಹಲಿ, ಮಾರ್ಚ್ 14: ಭಯೋತ್ಪಾದನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಷ್ಟು ಕಠಿಣ ನಿಲುವುಗಳನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೆಗೆದುಕೊಂಡಿರಲಿಲ್ಲ ಎಂದು ಹೇಳುವ ಮೂಲಕ ದೆಹಲಿಯ ಕಾಂಗ್ರೆಸ್ ಮುಖ್ಯಸ್ಥೆ ಶೀಲಾ ದೀಕ್ಷಿತ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.
ನ್ಯೂಸ್ 18 ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರಿಗೆ 26/11ರ ಮುಂಬೈ ದಾಳಿಯ ವಿಚಾರದಲ್ಲಿ ಯುಪಿಎ ಸರ್ಕಾರದ ನಿಲುವಿನ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು, 'ಭಯೋತ್ಪಾದನೆ ಎದುರಿಸುವಲ್ಲಿ ಈಗಿನ ಪ್ರಧಾನಿಯಷ್ಟು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಶಕ್ತಿಯುತರಾಗಿಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ' ಎಂದಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಹೆಚ್ಚಿನ ನಿರ್ಧಾರಗಳು ರಾಜಕೀಯ ಲಾಭದ ಉದ್ದೇಶ ಹೊಂದಿದ್ದವು ಎಂದೂ ಅವರು ಟೀಕಿಸಿದ್ದಾರೆ.

2008ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಮುಂಬೈನ ತಾಜ್ ಹೋಟೆಲ್ ಮತ್ತು ಇತರೆ ಸ್ಥಳಗಳಲ್ಲಿ ಉಗ್ರರು ಮನಬಂದಂತೆ ಗುಂಡು ಹಾರಿಸಿ ಜನರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮನಮೋಹನ್ ಸಿಂಗ್ ಸರ್ಕಾರ ಯಾವುದೇ ಸೇನಾ ಕಾರ್ಯಾಚರಣೆ ನಡೆಸಲು ಮುಂದಾಗಿರಲಿಲ್ಲ.
ಇದರಿಂದ ಗಡಿಯಾಚೆಗಿನ ಭಯೋತ್ಪಾದನೆ ತಗ್ಗುವುದಿಲ್ಲ ಮತ್ತು ಪಾಕಿಸ್ತಾನದೊಂದಿಗಿನ ರಾಜಕೀಯ ವಿವಾದಗಳು ಬಗೆಹರಿಯುವುದಿಲ್ಲ ಎಂದು ಆಗಿನ ಸರ್ಕಾರ ಪ್ರತಿಪಾದಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಸೇನಾ ಪಡೆಯು ಪಾಕಿಸ್ತಾನದ ನೆಲೆಯ ಮೇಲೆ ಎರಡು ಬಾರಿ ದಾಳಿ ನಡೆಸಿದೆ. 2016ರಲ್ಲಿ ಉರಿ ದಾಳಿಯ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಸರ್ಜಿಕಲ್ ದಾಳಿ ನಡೆಸಿತ್ತು. ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.












Click it and Unblock the Notifications