ಚುನಾವಣಾ ಫಲಿತಾಂಶದ ದಿನ ದೇಶಕ್ಕೆ ಉಗ್ರರ ಕಾಟ

ದೇಶದಲ್ಲಿ ಶಾಂತಿ ಕದಡಿ, ಅಟ್ಟಹಾಸ ಮೆರೆಯುವ ಬಗ್ಗೆ ಸುಳಿವು ಪಡೆದಿರುವ ಗುಪ್ತಚರ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರದಲ್ಲಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎಂದು IB ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ನಾಳೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ನಾಳೆ 16ನೇ ತಾರೀಖಿನಂದು 16ನೆ ಲೋಕಸಭೆ ಚುನಾವಣೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಸಂಚು ಮಾಡಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದೆ.
ಮುಖ್ಯವಾಗಿ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಅನಾಹುತ ಆಗಬಹುದು. ಉತ್ತರ ಪ್ರದೇಶದ 30 ಕಡೆಗಳಲ್ಲಿ ಹಾಗೂ ಬಿಹಾರದ 18 ಕಡೆಗಳಲ್ಲಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಂಭವ ಇದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆ.
ಈ ನಡುವೆ ನಾಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದೇಶದ ಜನರು ಕೂಡ ಎಚ್ಚರಿಕೆ ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. 'ಇಲ್ಲಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ. ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಪದಾರ್ಥಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ' ಎಂದೂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿಗೆ ಎಸ್ ಪಿಜಿ ಭದ್ರತೆ ನಾಳೆಯಿಂದಲೇ:
exit pollsಗಳ ಮೇಲೆ ವೀಶ್ವಾಸವಿರಿಸಿ ಕೇಂದ್ರ ಗೃಹ ಸಚಿವಾಲಯವು ನಾಳೆ ಅಧಿಕೃತವಾಗಿ ಫಲಿತಾಂಶಗಳು ಪ್ರಕಟವಾಗುವ ಸಂದರ್ಭದಲ್ಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಅವರ ಕುಟುಂಬಕ್ಕೆ Special Protection Group (SPG) ಭದ್ರತೆಯನ್ನೊದಗಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಅತ್ತ ಫಲಿತಾಂಶ ಬಹಿರಂಗವಾಗಿ ಮೋದಿ ಪಕ್ಷ ಅಧಿಕಾರದ ಸನಿಹ ಬರುತ್ತಿದ್ದಂತೆ ಅವರನ್ನು ರಕ್ಷಿಸಲು ಬುಲೆಟ್ ಪ್ರೂಫ್ ವಾಹನ ಮತ್ತು ಜಾಮರ್ ವ್ಯವಸ್ಥೆಗಳೊಂದಿಗೆ ಮೋದಿಯನ್ನು ಸುತ್ತವರಿಯಲು SPG ಸನ್ನದ್ಧವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಮೋದಿ ಅವರಿಗೆ Z-Plus category ಭದ್ರತೆ ಕಲ್ಪಿಸಲಾಗಿದೆ. National Security Guard ಮತ್ತು ಗುಜರಾತ್ ಪೊಲೀಸರು ಮೋದಿ ಸುತ್ತ ರಕ್ಷಣೆ ನಿಂತಿದ್ದಾರೆ.












Click it and Unblock the Notifications