ಆಡಳಿತ ಪಕ್ಷದ ಟೀಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಖರ್ಗೆ
ನವದೆಹಲಿ, ಜುಲೈ 20: ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಆಡಳಿತ ಪಕ್ಷಗಳ ಸದಸ್ಯರು ಕಾಂಗ್ರೆಸ್ ಮೇಲೆ ಮಾಡಿದ್ದ ಟೀಕೆಗಳನ್ನು ಒಂದೊಂದಾಗಿ ಹೆಕ್ಕಿ ಮಲ್ಲಿಕಾರ್ಜುನ ಖರ್ಗೆ ಉತ್ತರ ನೀಡಿದರು. ಖರ್ಗೆ ಮಾತನಾಡುವಾಗ ಆಡಳಿತ ಪಕ್ಷಗಳೂ ಸಹ ಶಾಂತಿಗೆ ಶರಣಾದವು.
60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿಲ್ಲ ಎಂಬ ಬಿಜೆಪಿಯ ಟೀಕೆಗೆ ಸೂಕ್ತ ಉತ್ತರ ನೀಡಿದ ಖರ್ಗೆ, ಎಲ್ಲಾ ಹಳ್ಳಿಗೆ ವಿದ್ಯುತ್ ನೀಡಿದ್ದೇವೆ ಎಂದು ಬಿಜೆಪಿ ಎದೆ ತಟ್ಟಿಕೊಳ್ಳುತ್ತದೆ, ಹಾಗಾದರೆ ಇಷ್ಟು ವರ್ಷದಲ್ಲಿ ದೇಶದಲ್ಲಿ ವಿದ್ಯುತ್ ಇರಲಿಲ್ಲವಾ, ವಿದ್ಯುತ್ ತಯಾರಿಸಿ ಅದನ್ನು ಲಕ್ಷಾಂತರ ಹಳ್ಳಿಗಳಿಗೆ ನೀಡಿರುವುದು ಕಾಂಗ್ರೆಸ್‌ನ ಸಾಧನೆಯಲ್ಲವೇ ಎಂದು ಪ್ರಶ್ನೆ ಮಾಡಿದರು.
ರಾಜನಾಥ ಸಿಂಗ್ ಅವರು ಮಾತನಾಡುತ್ತಾ ರಾಮನ ಪ್ರಸ್ತಾಪ ಮಾಡಿ ಆಡಳಿತ ಪಕ್ಷವು ರಾಮನಂತೆ ಎಂದರು ಈ ಮಾತಿಗೆ ಉತ್ತರಿಸಿದ ಖರ್ಗೆ 'ನೀವು ಬಾಯಲ್ಲಿ ರಾಮ, ಬಗಲಲ್ಲಿ ಕತ್ತಿ' ಎಂದು ಛೇಡಿಸಿದರು. ಅಷ್ಟೆ ಅಲ್ಲದೆ ನಿಮಗೆ ರಾಮ ನೆನಪಾಗುತ್ತಾರೆ ಆದರೆ ವಾಲ್ಮಿಕಿ , ಶಂಭೂಕ, ಏಕಲವ್ಯರಂತಹಾ ದಲಿತರ ನೆನಪಾಗದು ಎಂದರು.

ಬಿಜೆಪಿ ಭ್ರಷ್ಟ ಎನ್ನಲು ಕರ್ನಾಟಕದ ಉದಾಹರಣೆ
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿದ ಖರ್ಗೆ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರು. ಕರ್ನಾಟಕದಲ್ಲಿ ಬಿಜೆಪಿಯವರು ಶಾಸಕರ ಖರೀದಿಗೆಂದು ಕೋಟ್ಯಂತರ ಹಣ ಕೊಡುವುದಾಗಿ ಆಮಿಷ ಒಡ್ಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ಮೇಲೆ ಏಕೆ ವಿಶ್ವಾಸವಿಲ್ಲ
ತಮಗೆ ಏಕೆ ಕೇಂದ್ರ ಸರ್ಕಾರದ ಮೇಲೆ ಏಕೆ ವಿಶ್ವಾಸವಿಲ್ಲ ಎಂದು ಕಾರಣ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯ ಮಂತ್ರಿ ಒಬ್ಬರು ನಾವು ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿದ್ದಾರೆ ಹಾಗಾಗಿ ಈ ಸರ್ಕಾರ ಪ್ರಜಾಪ್ರಭುತ್ವ ಹಾಳುಮಾಡುತ್ತದೆ ಎಂಬ ಅನುಮಾನ ಇದೆ ಹಾಗಾಗಿ ನಮಗೆ ಈ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ಉಳಿಸಿದ್ದೇವೆ
ಕಾಂಗ್ರೆಸ್ ಇಷ್ಟು ವರ್ಷ ಪ್ರಜಾಪ್ರಭುತ್ವ ಉಳಿಸಿದೆ. ಹಾಗಾಗಿ ಇಂದು ಮೋದಿ ಅವರು ಪ್ರಧಾನಿ ಆಗುವಂತಹಾ ವ್ಯವಸ್ಥೆ ಇದೆ. ಅದೇ ಬಿಜೆಪಿ ಇಂದು ನಡೆಯುತ್ತಿರುವ ಹಾದಿಯಲ್ಲಿ ನಾವು ನಡೆದಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ. ಬಿಜೆಪಿ ಅಸಮಾನತೆಯನ್ನು ಜನರಲ್ಲಿ ಬಿತ್ತುತ್ತಿದೆ, ಸ್ವಾತಂತ್ರ್ಯ ಹರಣ ಮಾಡುತ್ತಿದೆ ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅವರು ಹೇಳಿದರು.

ರೈತರ ಬಗ್ಗೆ ಮೊಸಳೆ ಕಣ್ಣೀರು
ಬೆಂಬಲ ಬೆಲೆ ಹೆಚ್ಚಳ ಮಾಡಿರುವ ಬಗ್ಗೆ ಮಾತನಾಡಿದ ಖರ್ಗೆ, ಅದರಲ್ಲಿನ ಹುಳುಕುಗಳನ್ನು ಎತ್ತಿ ತೋರಿಸಿದರು, ಅಲ್ಲದೆ ಬಿಜೆಪಿ ಆಡಳಿತದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿರುವ ಬಗ್ಗೆ ಅಂಕಿ-ಅಂಶದ ಸಮೇತ ಮಾಹಿತಿ ನೀಡಿದರು.

ಆಂಧ್ರದ ಜನಕ್ಕಾಗಿ ಅವಿಶ್ವಾಸಕ್ಕೆ ಬೆಂಬಲ
ದುರುದ್ದೇಶದಿಂದ ಅವಿಶ್ವಾಸಕ್ಕೆ ಬೆಂಬಲ ನೀಡಿದೆ ಎಂಬ ಟೀಕೆಗೆ ಉತ್ತರಿಸಿದ ಖರ್ಗೆ, ನಾವು ಅಧಿಕಾರದಲ್ಲಿದ್ದಾಗ ಆಂಧ್ರ ವಿಭಜನೆಯಾಯಿತು. ಆಗಲೇ ನಾವು 5 ವರ್ಷಗಳ ಕಾಲ ಆಂಧ್ರಕ್ಕೆ ವೀಶೇಷ ಸ್ಥಾನಮಾನ ನೀಡಲು ಒಪ್ಪಿದ್ದೆವು ಎಂದ ಅವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಓದಿ ಹೇಳಿದರು. ನಾವು ಅವಿಶ್ವಾಸಕ್ಕೆ ಬೆಂಬಲ ನೀಡಿರುವ ಕಾರಣ ಆಂಧ್ರದ ಜನರೇ ಹೊರತು ಬೇರೆ ಏನೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸರಣಿ ಪ್ರಶ್ನೆ ಕೇಳಿದ ಖರ್ಗೆ
ಭಾಷಣ ಮುಗಿಯುವ ಮೊದಲ ಕೇಂದ್ರಕ್ಕೆ ಸರಣಿ ಪ್ರಶ್ನೆ ಕೇಳಿದ ಖರ್ಗೆ 15 ಲಕ್ಷ ಹಣ ಯಾವಾಗ ಸಿಗುತ್ತದೆ?, ಬ್ಯಾಂಕ್ ಹಣ ಪಡೆದು ಪರಾರಿಯಾಗುವುದು ಯಾವಾಗ ನಿಲ್ಲುತ್ತದೆ?, ಪೆಟ್ರೋಲ್, ಡೀಸೆಲ್ ಬೆಲೆ ಯಾವಾಗ ಕಡಿಮೆ ಆಗುತ್ತದೆ?, ಯುವಕರಿಗೆ ಯಾವಾಗ ಉದ್ಯೋಗ ಸಿಗುತ್ತದೆ?, ದಲಿತರ ಮೇಲೆ ಅತ್ಯಾಚಾರ ಯಾವಾಗ ನಿಲ್ಲುತ್ತದೆ, ನಾರಿಯ ಮೇಲೆ ಪ್ರಹಾರ ಯಾವಾಗ ನಿಲ್ಲುತ್ತದೆ, ಅಚ್ಛೇದಿನ್ ಯಾವಾಗ ಬರುತ್ತದೆ? ಎಂದು ಪ್ರಶ್ನಿಸಿದರು.












Click it and Unblock the Notifications