ಕೇಜ್ರಿವಾಲ್ ಮನೆಗೆ ಪೊಲೀಸರು, ಅಮಿತ್ ಶಾ ಮನೆಗೆ ಯಾವಾಗ?
ನವದೆಹಲಿ, ಫೆಬ್ರವರಿ 23: ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಎಎಪಿ ಶಾಸಕರಿಂದ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಹಲವು ಬೆಳವಣಿಗೆಗಳು ನಡೆದಿವೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಪರಿಶೀಲನೆಗಾಗಿ ಇಂದು ಪೊಲೀಸರು ಕೇಜ್ರಿವಾಲ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಟ್ಟೀಟ್ ಮಾಡಿರುವ ಕೇಜ್ರಿವಾಲ್ ಅಮಿತ್ ಶಾರನ್ನು ಲೋಯಾ ಪ್ರಕರಣದಲ್ಲಿ ಪ್ರಶ್ನಿಸುವುದು ಯಾವಾಗ ಎಂದು ಕೇಳಿದ್ದಾರೆ.
"ನನ್ನ ಮನೆಗೆ ಪೊಲೀಸರನ್ನು ಕಳುಹಿಸಲಾಗಿದೆ. ನನ್ನ ಮನೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಉತ್ತಮ ವಿಚಾರ. ನ್ಯಾಯಾಧೀಶ ಲೋಯಾ ಪ್ರಕರಣದಲ್ಲಿ ಅಮಿತ್ ಶಾರನ್ನು ಪ್ರಶ್ನಿಸುವುದು ಯಾವಾಗ?" ಎಂದು ಕೇಜ್ರಿವಾಲ್ ಟ್ಟೀಟ್ ಮಾಡಿದ್ದಾರೆ.

ಕೇಜ್ರಿವಾಲ್ ಮನೆಯಿಂದ ಪೊಲೀಸರು 21 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಗೆ ಕೇಜ್ರಿವಾಲ್ ಸಮಯ ಕೇಳಿದ್ದಾರೆ. ಈಗಾಗಲೇ ಎಎಪಿಯ ಇಬ್ಬರು ಶಾಸಕರನ್ನು ಬಂಧಿಸಲಾಗಿದ್ದು ಈ ಸಂಬಂಧ ಸಂಪುಟದ ಸಹೋದ್ಯೊಗಿಗಳ ಜತೆ ತೆರಳಿ ಬೈಜಾಲ್ ಜತೆ ಕೇಜ್ರಿವಾಲ್ ಚರ್ಚೆ ನಡೆಸಲಿದ್ದಾರೆ.
ಇನ್ನೊಂದು ಕಡೆ ಐಎಎಸ್ ಅಧಿಕಾರಿಗಳು ಕೇಂದ್ರ ಗೃಹ ಖಾತೆ ರಾಜ್ಯದರ್ಜೆ ಸಚಿವರನ್ನು ಈ ಸಂಬಂಧ ಭೇಟಿಯಾಗಿ ಚರ್ಚಿಸಿದ್ದಾರೆ.












Click it and Unblock the Notifications