ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದ ಇಂದಿರಾ ಗಾಂಧಿ ಏರ್‌ಪೋರ್ಟ್
ನವದೆಹಲಿ, ಆಗಸ್ಟ್ 10: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಮೂರನೇ ವರ್ಷವೂ 'ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ' ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಪಾತ್ರವಾಗಿದೆ.
ಏರ್‌ಪೋರ್ಟ್ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಪ್ರಶಸ್ತಿಯಾದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ ನಡೆಸಿದ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕರ ತೃಪ್ತಿ ಸಮೀಕ್ಷೆಯಲ್ಲಿ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ ಭಾರತದ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ. ಇದು ಭಾರತದ ಏಕೈಕ ವಿಮಾನ ನಿಲ್ದಾಣವಾಗಿದೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಐಜಿಐಎ) ನಿರ್ವಹಿಸುತ್ತಿರುವ ಜಿಎಂಆರ್ ನೇತೃತ್ವದ ಒಕ್ಕೂಟ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ಈ ಘೋಷಣೆ ಮಾಡಿದೆ.

2021ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ಸತತ ಮೂರನೇ ವರ್ಷ ಐಜಿಐಎ 'ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ' ಎಂದು ಗುರುತಿಸಲ್ಪಟ್ಟಿದೆ ಮತ್ತು ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಮಾದರಿ ಸುರಕ್ಷತಾ ಶಿಷ್ಟಾಚಾರಗಳನ್ನು ಒದಗಿಸಿದ್ದಕ್ಕಾಗಿ ವಿಮಾನ ನಿಲ್ದಾಣಕ್ಕೆ 'ಕೋವಿಡ್ -19 ಏರ್‌ಪೋರ್ಟ್ ಎಕ್ಸಲೆನ್ಸ್ ಅವಾರ್ಡ್' ನೀಡಲಾಗಿದೆ.
ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
* ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ
* ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ
* ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ
* ನೇತಾಜಿ ಸುಭಾಸ ಚಂದ್ರ ಬೋಸ್ ನಿಲ್ದಾಣ, ಕೊಲ್ಕತ್ತಾ
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು
* ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿ
* ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಳಿಕೋಡ್
* ತ್ರಿವೇಂಡ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ
* ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋವಾ
* ಸರ್ದಾರ್ ವಲ್ಲಭಭಾಯ್ ಪಟೇಲ್ ನಿಲ್ದಾಣ, ಅಹ್ಮದಾಬಾದ್
* ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್
*ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ನಿಲ್ದಾಣ, ಗುವಾಹಟಿ
* ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು , ಕರ್ನಾಟಕ
* ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ, ನಾಗಪುರ, ಮಹಾರಾಷ್ಟ್ರ
* ಬಿಜು ಪಟ್ನಾಯಕ್ ಏರ್ಪೋರ್ಟ್, ಭುವನೇಶ್ವರ, ಒಡಿಶಾ
* ತಿರುಚಿರಾಪಳ್ಳಿ ವಿಮಾನ ನಿಲ್ದಾಣ, ತಿರುಚಿರಾಪಳ್ಳಿ, ತಮಿಳುನಾಡು
* ಕೊಯಮತ್ತೂರು ವಿಮಾನ ನಿಲ್ದಾಣ, ಕೊಯಮತ್ತೂರು, ತಮಿಳುನಾಡು
* ಚೌಧರಿ ಚರಣ್ ಸಿಂಗ್ ನಿಲ್ದಾಣ, ಲಖನೌ, ಉತ್ತರ ಪ್ರದೇಶ
* ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ನಿಲ್ದಾಣ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್
ಭಾರತದ ವಿಮಾನಗಳ ನಿಷೇಧ ವಿಸ್ತರಿಸಿದ ಕೆನಡಾ
ವಿಶ್ವದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ವಿಶ್ವದ ಬಹುತೇಕ ರಾಷ್ಟ್ರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.
ಅದೇ ರೀತಿ ಕೋವಿಡ್- 19 ಸೋಂಕು ತಡೆಗಟ್ಟುವ ಸಲುವಾಗಿ ಕೆನಡಾ ದೇಶವು ಭಾರತದಿಂದ ತೆರಳುವ ಅಂತರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ವಿಧಿಸಿದ್ದ ನಿಷೇಧವನ್ನು ಮತ್ತೆ ಸೆಪ್ಟೆಂಬರ್ 21ರವರೆಗೆ ವಿಸ್ತರಿಸಿದೆ ಎಂದು ಫೆಡರಲ್ ಸಾರಿಗೆ ಸಚಿವಾಲಯ ತಿಳಿಸಿದೆ.
ಕೆನಾಡದ ಸಾರ್ವಜನಿಕ ಆರೋಗ್ಯ ಏಜೆನ್ಸಿಯು ದೇಶದ ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡಿದ್ದು, ಟ್ರಾನ್ಸ್‌ಪೋರ್ಟ್ ಕೆನಡಾ ಏರ್‍ಮೆನ್‍ಗೆ ನೋಟಿಸ್ ವಿಸ್ತರಿಸಿದೆ. ಭಾರತದಿಂದ ಕೆನಡಾಕ್ಕೆ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನವನ್ನು 2021ರ ಸೆಪ್ಟೆಂಬರ್ 21ರವರೆಗೆ ನಿರ್ಬಂಧ ಹೇರಲಾಗಿದೆ.
ಈ ಮುನ್ನ ಏಪ್ರಿಲ್ 22ರಂದು ಕೊರೊನಾ ವೈರಸ್ ಎರಡನೇ ಅಲೆ ಪ್ರಾರಂಭವಾದಾಗಿನಿಂದ ಭಾರತದಿಂದ ಕೆನಡಾಕ್ಕೆ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ಇದೀಗ ಐದನೇ ಬಾರಿಗೆ ಈ ನಿಷೇಧವನ್ನು ವಿಸ್ತರಿಸಲಾಗಿದೆ.
ಈ ಹಿಂದೆ ಕೆನಡಾ ಹೇರಲಾಗಿದ್ದ ನಿಷೇಧ ಆಗಸ್ಟ್ 21ರಂದು ಮುಕ್ತಾಯಗೊಳ್ಳಬೇಕಿತ್ತು, ಆದರೆ ಇದೀಗ ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ. ಆದರೆ ಸರಕು ಅಥವಾ ವೈದ್ಯಕೀಯ ವರ್ಗಾವಣೆಗೆ ನಿಷೇಧ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications