ಎಚ್‌ಎಎಲ್ ಯುದ್ಧವಿಮಾನ ಪತನ: ಸದನದಲ್ಲಿ ರಾಜೀವ್ ಚಂದ್ರಶೇಖರ್ ಪ್ರಶ್ನೆ
ನವದೆಹಲಿ, ಫೆಬ್ರವರಿ 06: ಎಚ್‌ಎಎಲ್‌ನಲ್ಲಿ ಫೆಬ್ರವರಿ 1 ರಂದು ಮಿರಾಜ್ ಯುದ್ಧವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರು ಸಂಸತ್‌ನ ಗಮನಸೆಳೆಯುವ ಯತ್ನ ಮಾಡಿದರು ಆದರೆ ಇತರ ಸಂಸದರ ಗದ್ದಲದಿಂದಾಗಿ ಸಾಧ್ಯವಾಗಲಿಲ್ಲ.
ಸಿಬಿಐ ವರ್ಸಸ್ ಮಮತಾ ಬ್ಯಾನರ್ಜಿ ಗಲಾಟೆಯೇ ಇಂದು ಉಭಯ ಸದನದ ಕಾಲಾವಕಾಶವನ್ನು ವ್ಯಯ ಮಾಡಿದ ಕಾರಣ ಟಿಎಂಸಿ ಸಂಸದರ ಗಲಾಟೆ ನಡುವೆ ರಾಜೀವ್ ಚಂದ್ರಶೇಖರ್ ಅವರು ತಮ್ಮ ಪ್ರಶ್ನೆಯನ್ನು ಕೇಳಲಾಗಲಿಲ್ಲ.

ಶೂನ್ಯವೇಳೆಯಲ್ಲಿಯೇ ಎಚ್‌ಎಎಲ್ ದುರ್ಘಟನೆ ಬಗ್ಗೆ ಚರ್ಚೆ ಮಾಡಲು ರಾಜೀವ್ ಚಂದ್ರಶೇಖರ್ ಅವರು ಅವಕಾಶ ಪಡೆದಿದ್ದರು ಆದರೆ ಟಿಎಂಸಿ ಸಂಸದರ ಗಲಾಟೆಯಿಂದಾಗಿ ಘಟನೆ ಬಗ್ಗೆ ಸದನದ ಗಮನ ಸೆಳೆಯಲು ಸಾಧ್ಯವಾಗಿಲ್ಲ.
ಆದರೆ ಫೆಬ್ರವರಿ 06ರಂದು ಶೂನ್ಯವೇಳೆಯಲ್ಲಿಯೇ ಇದೇ ವಿಷಯವನ್ನು ರಾಜೀವ್ ಚಂದ್ರಶೇಖರ್ ಅವರು ಚರ್ಚಿಸಲಿದ್ದು, ಮಿರಾಜ್ ಯುದ್ಧ ವಿಮಾನದ ಪತನದ ಬಗ್ಗೆ ವಿಸ್ತೃತ ತನಿಖೆಗೆ ಅವರು ಒತ್ತಾಯಿಸಲಿದ್ದಾರೆ.
ವಿಮಾನದಲ್ಲಿ ಪತನಗೊಂಡು ಅಸುನೀಗಿದ ಪೈಲೆಟ್‌ಗಳು ಸಾಮಾನ್ಯರಾಗಿರಲಿಲ್ಲ, ಅವರು ತರಬೇತಿ ಹೊಂದಿದ ಅನುಭವಿ ಪೈಲೆಟ್‌ಗಳಾಗಿದ್ದರು, ಹಾಗಾಗಿ ಈ ಪ್ರಕರಣದ ವಿಸ್ತೃತ ತನಿಖೆ ಅತ್ಯಂತ ಅವಶ್ಯಕ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಪರೀಕ್ಷಾರ್ಥ ಉಡಾವಣೆ ವೇಳೆ ವಿಮಾನಗಳು ಅಪಘಾತಕ್ಕೆ ಈಡಾಗುತ್ತಿರುವುದು ಮೊದಲಲ್ಲ, ಹಾಗಾಗಿ ಎಚ್‌ಎಎಲ್ ಮತ್ತು ಇತರೆ ಸಂಸ್ಥೆಗಳು ತಾಂತ್ರಿಕವಾಗಿ ಇನ್ನಷ್ಟು ಆಧುನಿಕ ಆಗುವ ಹಾಗೂ ಪರೀಕ್ಷಾರ್ಥ ಉಡಾವಣೆ ವೇಳೆ ಅಸುನೀಗಿದ ಪೈಲೆಟ್‌ಗಳ ಕುಟುಂಬಕ್ಕೆ ಶಕ್ತಿ ನೀಡುವ ಯೋಜನೆಯನ್ನು ಮಾಡಲು ಸಹ ಆಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.












Click it and Unblock the Notifications