ಸೊಹ್ರಾಬುದ್ದೀನ್ ಎನ್ ಕೌಂಟರ್: ಅನುಮಾನ ಮೂಡಿಸಿದ ಇನ್‌ಸ್ಪೆಕ್ಟರ್ ಹೇಳಿಕೆ
ನವದೆಹಲಿ, ನವೆಂಬರ್ 29: ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿಯಲ್ಲ ಎಂದು ಹೇಳುವಂತೆ ಹಲವು ಜನರಿಂದ ತಮ್ಮ ಮೇಲೆ ಒತ್ತಡ ಬಂದಿರುವುದಾಗಿ ರಾಜಸ್ತಾನ ಪೊಲೀಸರ ತಂಡದ ಇನ್‌ಸ್ಪೆಕ್ಟರ್ ಒಬ್ಬರು ಹೇಳಿದ್ದಾರೆ.
ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಇನ್‌ಸ್ಪೆಕ್ಟರ್ ಅಬ್ದುಲ್ ರೆಹಮಾನ್ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಈ ಹೇಳಿಕೆ ನೀಡಿದ್ದಾರೆ.
ಎಫ್‌ಐಆರ್ ನೈಜವಾಗಿದ್ದು, ಅದನ್ನು ನಾನೇ ದಾಖಲಿಸಿದ್ದೇನೆ ಎಂದು ಹೇಳುವಂತೆ ಯಾವಾಗಲೂ ಅನೇಕರಿಂದ ಒತ್ತಡಗಳು ಬರುತ್ತಿದ್ದವು.

ಆದರೆ ಎಫ್‌ಐಆರ್ ದಾಖಲಿಸಿದ್ದು ನಾನು ಅಲ್ಲ ಎಂದು ಸಿಐಡಿ ಮತ್ತು ಸಿಬಿಐ ಎರಡಕ್ಕೂ ತಿಳಿಸಿದ್ದೆ. ಆದರೆ, ಆ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ತನಿಖೆ ನಡೆಸಲಿಲ್ಲ. ಎಫ್‌ಐಆರ್‌ನಲ್ಲಿ ನನ್ನ ಸಹಿ ಇರಲಿಲ್ಲ. ಇದನ್ನೂ ತನಿಖಾ ಸಂಸ್ಥೆಗಳಿಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ.
2005ರಲ್ಲಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಬಳಿಕ, ಆತ ಗುಜರಾತ್‌ನಲ್ಲಿ ಕೋಮು ಸೌಹಾರ್ದ ಕದಡಲು ಸಂಚು ರೂಪಿಸಿದ್ದ ಲಷ್ಕರ್ ಎ ತಯಬಾದ ಉಗ್ರನಾಗಿದ್ದ ಎಂದು ಎಫ್‌ಐಆರ್ ದಾಖಲಿಸಲಾಗಿತ್ತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸಿಬಿಐ, 2005ರ ನವೆಂಬರ್ 23ರಂದು ಎನ್ ಕೌಂಟರ್ ಆಗುವ ಮೂರು ದಿನಗಳ ಮುನ್ನ ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬಿ ಅವರನ್ನು ಅಪಹರಿಸಲಾಗಿತ್ತು ಎಂದು ತಿಳಿಸಿತ್ತು.
ಈ ಪ್ರಕರಣದಲ್ಲಿ 38 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ತಾವು ನಿರಪರಾಧಿಗಳು ಎಂದು ಪ್ರತಿಪಾದಿಸಿರುವ ಎಲ್ಲ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಎನ್‌ಕೌಂಟರ್ ನೈಜವಾದದ್ದು ಎಂದೇ ಹೇಳಿದ್ದಾರೆ.
ಆದರೆ, ಈಗ ರೆಹಮಾನ್ ನೀಡಿರುವ ಹೇಳಿಕೆ ಪ್ರಕರಣದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.












Click it and Unblock the Notifications