ಏನಪ್ಪಾ ಕಾರಣ?: ದೆಹಲಿ ವಿಧಾನಸಭೆಯಲ್ಲಿ ರಾತ್ರಿಯಿಡೀ ಜಿದ್ದಾಜಿದ್ದಿನ ಪ್ರತಿಭಟನೆ
ನವದೆಹಲಿ, ಆಗಸ್ಟ್ 30: ದೆಹಲಿ ವಿಧಾನಸಭೆಯು ಇಡೀರಾತ್ರಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ಪ್ರತಿಭಟನೆಗೆ ಸಾಕ್ಷಿ ಆಯಿತು. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷ ಬಿಜೆಪಿಗಳು ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಪ್ರತಿಭಟನೆ ನಡೆಸಿದವು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2016ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 1,400 ಕೋಟಿ ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ತಮ್ಮ ಉದ್ಯೋಗಿಗಳಿಗೆ ಒತ್ತಡ ಹೇರಿದ್ದರು ಎಂದು ಆಪ್ ಶಾಸಕರು ಆರೋಪಿಸಿದ್ದಾರೆ.
ಇದರ ಜೊತೆಗೆ ಈಗ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅನ್ನು ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸುತ್ತಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಇಡೀರಾತ್ರಿ ನಡೆದ ಬೆಳವಣಿಗೆಗಳು ರಾಜಕೀಯ ಹೈಡ್ರಾಮಾವನ್ನು ಸೃಷ್ಟಿಸಿವೆ.

ಬಿಜೆಪಿ ಮತ್ತು ಆಪ್ ನಡುವೆ ಆರೋಪ-ಪ್ರತ್ಯಾರೋಪ
ನೋಟು ಅಮಾನ್ಯೀಕರಣದ ಸಮಯದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ಅಕ್ರಮ ಹಣ ವರ್ಗಾವಣೆಯನ್ನು ಮಾಡಿದ್ದಾರೆ ಎಂದು ಆಡಳಿತಾರೂಢ ಆಪ್ ಶಾಸಕರು ದೂಷಿಸಿದ್ದಾರೆ. ಇದಕ್ಕೆ ಪ್ರತ್ಯಾಸ್ತ್ರವಾಗಿ ಬಿಜೆಪಿ ಉಲ್ಟಾ ಹೊಡೆದಿದೆ. ಮದ್ಯ ನೀತಿ ಮತ್ತು ದೆಹಲಿ ಶಾಲೆಗಳ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಸಚಿವರನ್ನು ರಕ್ಷಿಸುವುದಕ್ಕಾಗಿ ಆಮ್ ಆದ್ಮಿ ಪಕ್ಷವು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿಗರು ದೂಷಿಸುತ್ತಿದ್ದಾರೆ.

ಆಪ್ ಮತ್ತು ಬಿಜೆಪಿಗರ ಪ್ರತಿಭಟನೆ ನಡೆದಿದ್ದು ಎಲ್ಲಿ?
ಇತ್ತೀಚೆಗೆ ದೆಹಲಿ ಅಬಕಾರಿ ನೀತಿ 2021-22ರ ಜಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ವಿಕೆ ಸಕ್ಸೇನಾ ಶಿಫಾರಸು ಮಾಡಿದ್ದರು. ಎಎಪಿ ಅವರು ನಗರಾಡಳಿತದ ಕೆಲಸದಲ್ಲಿ "ಮಧ್ಯಪ್ರವೇಶಿಸುತ್ತಿದ್ದಾರೆ" ಎಂದು ಆರೋಪಿಸಿದ್ದರು. ಎಎಪಿ ಶಾಸಕರು ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತರೆ, ಬಿಜೆಪಿ ಶಾಸಕರು ವಿಧಾನಸಭೆ ಆವರಣದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಪ್ರತಿಮೆಗಳ ಬಳಿ ಧರಣಿ ಆರಂಭಿಸಿದರು.
ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಪ್ರತಿಭಟನೆ ನಡೆಸಿದ ಆಪ್ ಶಾಸಕರು ಮತ್ತು ಕಾರ್ಯಕರ್ತರು ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಎಲ್‌ಜಿಯವರ ಭ್ರಷ್ಟಾಚಾರದ ಬಗ್ಗೆ ತಿಳಿದಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಕ್ಸೇನಾ ಅವರನ್ನು ಆ ಹುದ್ದೆಗೆ ನೇಮಿಸಿದ್ದಾರೆ ಎಂದು ಆರೋಪಿಸಿದರು. ಕೆವಿಐಸಿಯಲ್ಲಿ ಕೆಲಸ ಮಾಡುತ್ತಿರುವ ಕ್ಯಾಷಿಯರ್‌ಗಳು ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ಸಕ್ಸೇನಾ ಕೋಟಿಗಟ್ಟಲೆ ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ದೂಷಿಸಲಾಗಿದೆ.

ಆಪ್ ಆರೋಪದ ಬಗ್ಗೆ ಬಿಜೆಪಿ ಶಾಸಕರು ಹೇಳುವುದೇನು?
ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವವರೆಗೂ ಬಿಜೆಪಿ ಶಾಸಕರು ಧರಣಿ ಕುಳಿತುಕೊಳ್ಳುವುದನ್ನು ತಪ್ಪಿಸುವುದಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಎಂದು ಹೇಳಿದ್ದಾರೆ. ಬಿಜೆಪಿಯ ಎಲ್ಲಾ ಎಂಟು ಶಾಸಕರು ಸೋಮವಾರ ಮತ್ತು ಶುಕ್ರವಾರದ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದ ಕಲಾಪದಲ್ಲಿ ಭಾಗವಾಗಿರಲಿಲ್ಲ, ಏಕೆಂದರೆ ಅವರನ್ನು ಸದನದಿಂದ ಮಾರ್ಷಲ್ ಔಟ್ ಮಾಡಲಾಗಿತ್ತು. ವಿಕೆ ಸಕ್ಸೇನಾ ಸಮರ್ಥನೆಗೆ ಬಿಜೆಪಿ ಮುಂದಾಗಿದ್ದು, ಅದನ್ನು ತಡೆಯಲು ಹಾಗೂ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂಷಿಸಿದರು.

ಆಪ್ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ
ಲೆಫ್ಟಿನೆಂಟ್ ಗವರ್ನರ್ ಶಿಫಾರಸುಗಳ ಆಧಾರದ ಮೇಲೆ ದೆಹಲಿ ಸರ್ಕಾರವು 2021-22ನೇ ಸಾಲಿನ ಅಬಕಾರಿ ನೀತಿ ಅನ್ನು ರಚನೆ ಮತ್ತು ಅನುಷ್ಠಾನ ಮಾಡಿದ್ದು, ಅದರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಖಾತೆ ಹೊಂದಿರುವ ಮತ್ತು ಪ್ರಕರಣದಲ್ಲಿ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ನಿವಾಸದ ಮೇಲೂ ಸಂಸ್ಥೆ ದಾಳಿ ನಡೆಸಿತ್ತು.
ಅದೇ ರೀತಿ ಕಳೆದ ವಾರ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣದ ತನಿಖೆಯ ಕುರಿತು ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ವರದಿಯ ಮೇರೆಗೆ ಕಾರ್ಯನಿರ್ವಹಿಸಲು ಎರಡೂವರೆ ವರ್ಷಗಳಿಗೂ ಹೆಚ್ಚು ವಿಳಂಬದ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವರದಿ ಕೇಳಿದ್ದರು. ಈ ಬೆಳವಣಿಗೆಗಳಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಸಕ್ಸೇನಾ ವಿರುದ್ಧ ಆಪ್ ತಿರುಗಿ ಬಿದ್ದಿದೆ ಎಂದು ಬಿಜೆಪಿಯು ಆರೋಪಿಸುತ್ತಿದೆ.












Click it and Unblock the Notifications