Video: ದೆಹಲಿಯಲ್ಲಿ ಬಿರುಗಾಳಿ-ಮಳೆಗೆ 300 ಮರಗಳು ನೆಲಕಚ್ಚಿದ್ದು, ಇಬ್ಬರು ಸಾವು
ನವದೆಹಲಿ, ಮೇ 30: ಸೋಮವಾರ ಸಂಜೆಯಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ರಾಷ್ಟ್ರ ರಾಜಧಾನಿ ನವದೆಹಲಿ ತತ್ತರಿಸಿದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯ ರಭಸಕ್ಕೆ 300ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಭಾರಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದಾರೆ.
ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ನಿವಾಸದ ಹೊರಗೆ ನಿಂತಿದ್ದಾಗ ಬಲವಾದ ಗಾಳಿಯಿಂದ ಪಕ್ಕದ ಮನೆಯ ಬಾಲ್ಕನಿಯ ಒಂದು ಭಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಉತ್ತರ ದೆಹಲಿಯ ಅಂಗೂರಿ ಬಾಗ್ ಪ್ರದೇಶದಲ್ಲಿ, ಬಸೀರ್ ಬಾಬಾ ಎಂದು ಗುರುತಿಸಲಾದ 65 ವರ್ಷದ ನಿರಾಶ್ರಿತ ವ್ಯಕ್ತಿಯೊಬ್ಬರು ಮರವೊಂದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗಿವೆ ಎನ್ನುವುದನ್ನು ಈ ವರದಿಯಲ್ಲಿ ವಿಡಿಯೋ ಸಹಿತವಾಗಿ ನೋಡಿ.
|
ದೆಹಲಿಯಲ್ಲಿ ಧಾರಾಕಾರ ಮಳೆಗೆ ವಾಹನ ಸವಾರರು ಕಂಗಾಲು
ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಸಂಜೆಯಿಂದ ಶುರುವಾದ ಮಳೆಯ ಅಬ್ಬರ ರಾತ್ರಿಯವರೆಗೂ ಮುಂದುವರಿಯಿತು. ದೆಹಲಿಯ ಫಿರೋಜ್‌ಶಾ ರಸ್ತೆ, ಟಾಲ್‌ಸ್ಟಾಯ್ ಮಾರ್ಗ, ಕೋಪರ್ನಿಕಸ್ ರಸ್ತೆ, ಕೆಜಿ ಮಾರ್ಗ ಮತ್ತು ಪಂಡಿತ್ ರವಿಶಂಕರ್ ಶುಕ್ಲಾ ಲೇನ್ ಬಳಿಯ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ವಾಹನಗಳು ಸಿಲುಕಿಕೊಂಡವು. ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
|
ಬಿರುಗಾಳಿಗೆ 300ಕ್ಕೂ ಹೆಚ್ಚು ಮರಗಳು ನೆಲ ಕಚ್ಚಿದವು
ದೆಹಲಿಯಲ್ಲಿ ಸೋಮವಾರ ಬೀಸಿದ ಬಿರುಗಾಳಿಯು 2018ರ ನಂತರದ ತೀವ್ರ ಚಂಡಮಾರುತವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿ ಚಂಡಮಾರುತದ ಹೊಡೆತಕ್ಕೆ 300ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ. ಮರಗಳು ಧರೆಗುರುಳಿರುವ ಬಗ್ಗೆ ಅಧಿಕಾರಿಗಳಿಗೆ ದೂರುಗಳು ಬಂದಿವೆ. ಭಾರೀ ಮಳೆ ಸುರಿದ ಪರಿಣಾಮ ಹಲವಾರು ಮರಗಳು ನೆಲಕ್ಕುರುಳಿದ್ದು, ಸ್ವತಃ ಬಿಜೆಪಿ ಸಂಸದೆ ಮೇನಕಾ ಗಾಂಧಿ ಜಂತರ್ ಮಂತರ್ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆಗೆದು ಹಾಕಿದ್ದಾರೆ.

ಬಿರುಗಾಳಿ ಸಹಿತ ಮಳೆಗೆ ಜಾಮಾ ಮಸೀದಿಯ ಗುಮ್ಮಟಕ್ಕೆ ಹಾನಿ
ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಐತಿಹಾಸಿಕ ಜಾಮಾ ಮಸೀದಿ ಮೇಲ್ಭಾಗದ ಮುಖ್ಯ ಗುಮ್ಮಟಕ್ಕೆ ಹಾನಿಯಾಗಿದೆ. ಸೋಮವಾರ ಸಂಜೆ ಮಳೆಯಿಂದಾಗಿ ಮಸೀದಿಯ ಕೆಲವು ಕಲ್ಲುಗಳು ಸಡಿಲಗೊಂಡು ಮೇಲ್ಭಾಗವು ಕುಸಿದು ಬಿದ್ದಿದೆ. ಮಿನಾರ್‌ಗಳು ಮತ್ತು ಮಸೀದಿಯ ಇತರ ಭಾಗಗಳಿಂದ ಬಿದ್ದ ಕಲ್ಲುಗಳಿಂದ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಾಮಾ ಮಸೀದಿ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ.
"ಮುಖ್ಯ ಗುಮ್ಮಟದ ಕಲಾಸ್ (ಅಂತಿಮ) ಕಳಚಿ ಬಿದ್ದಿದೆ. ಹೆಚ್ಚಿನ ಹಾನಿಯನ್ನು ತಡೆಯಲು ತುರ್ತು ದುರಸ್ತಿ ಅಗತ್ಯವಿದೆ. ಮಸೀದಿ ರಚನೆಯ ಕೆಲವು ಕಲ್ಲುಗಳು ಸಡಿಲಗೊಂಡು ಬಿದ್ದಿವೆ. ಪುರಾತತ್ತ್ವ ಶಾಸ್ತ್ರದಲ್ಲಿ ಮಸೀದಿ ರೋಪಿಂಗ್ ಅನ್ನು ತಕ್ಷಣ ದುರಸ್ತಿ ಮಾಡಲು ನಾನು ಪ್ರಧಾನಿಗೆ ಪತ್ರ ಬರೆಯುತ್ತೇನೆ," ಎಂದಿದ್ದಾರೆ. ಇನ್ನೊಂದು ಕಡೆಯಲ್ಲಿ ಹಾನಿಯ ಪರಿಶೀಲನೆ ಮತ್ತು ಮೌಲ್ಯಮಾಪನ ಮಾಡುವುದಕ್ಕಾಗಿ ಜಾಮಾ ಮಸೀದಿಗೆ ತಂಡವನ್ನು ಕಳುಹಿಸುವುದಾಗಿ ದೆಹಲಿ ವಕ್ಫ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಕಾರಣವಿದೆಯೇ?
ಸೋಮವಾರ ಸಂಜೆಯ ಹವಾಮಾನದಲ್ಲಿನ ಬೆಳವಣಿಗೆಗಳಿಗೆ ವಾಯುವ್ಯ ರಾಜಸ್ಥಾನ ಮತ್ತು ಪಕ್ಕದ ಪಾಕಿಸ್ತಾನದ ಮೇಲೆ ಪಶ್ಚಿಮದ ಅಡಚಣೆ-ಪ್ರೇರಿತ ಚಂಡಮಾರುತದ ಪರಿಚಲನೆಯೇ ಮುಖ್ಯ ಕಾರಣ ಎಂದು ಭಾರತದ ಹವಾಮಾನ ಇಲಾಖೆ (IMD) ತಿಳಿಸಿದೆ. ಬಂಗಾಳಕೊಲ್ಲಿಯಿಂದ ತೇವಾಂಶಯುಳ್ಳ ಪೂರ್ವ ಮಾರುತಗಳು ಚಂಡಮಾರುತದ ಪರಿಚಲನೆಗೆ ಪೂರಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ. ಪಾಲಮ್ ಹವಾಮಾನ ಕೇಂದ್ರವು ಗಂಟೆಗೆ 70 ಕಿಮೀ ವೇಗದ ಗಾಳಿಯನ್ನು ದಾಖಲಿಸಿದೆ.












Click it and Unblock the Notifications