ಬಿಜೆಪಿ 72 ಲೋಕಸಭಾ ಸ್ಥಾನಗಳನ್ನೂ ಬಾಚುತ್ತದಾ?
ಬೆಂಗಳೂರು, ಡಿ.8: ಕಚೇರಿ ಕಟ್ಟೆ, ಅಂಗಡಿ ಮುಂಗಟ್ಟೆ ಪಂಚಾಯಿತಿ ಕಟ್ಟೆ ಹೀಗೆ ಇಂದು ಎಲ್ಲೆಂದರಲ್ಲಿ ನಿನ್ನೆಯ ಚುನಾವಣಾ ಫಲಿತಾಂಶಗಳದ್ದೆ ಮಾತು/ ಚರ್ಚೆ. ಅಬ್ಬಬ್ಬಾ! ಮತದಾರ ನಿಜಕ್ಕೂ ಶಾಣ್ಯ ಅದಾನ. ಭ್ರಷ್ಟ ಪಕ್ಷಗಳಿಗೆ ಸಮ ಮಂಡೆ ಬಿಸಿ ಮಾಡಿದ್ದಾನೆ. ಹಾಗೇ ಆಗಬೇಕು. ನಾವೂ ಹಾಗೇ ಮಾಡಬೇಕು. ಭ್ರಷ್ಟರನ್ನು ಪ್ರೋತ್ಸಾಹಿಸಬಾರದು. ಹೊಸ ಅಲೆಯನ್ನು ಲಂಗರು ಹಾಕಿ ಹಿಡಿದಿಡಬೇಕು ... ಹೀಗೇ ವೆರೈಟಿ ಮಾತುಗಳು ಕೇಳಿಬರುತ್ತಿವೆ.
ಈ ಮಧ್ಯೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ 4-0 ಲೀಡ್ ಪಡೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಈ ನಾಲ್ಕೂ ರಾಜ್ಯಗಳಲ್ಲಿರುವ 72 ಲೋಕಸಭಾ ಸ್ಥಾನಗಳನ್ನು ಗೆದ್ದು, ಅಲ್ಲಿಂದ ಮುಂದಕ್ಕೆ ಸರಿಯಾಗಿ 272ರ ಮ್ಯಾಜಿಕಲ್ ನಂಬರ್ ಅನ್ನು ದಾಟುತ್ತದಾ? ಎಂಬ ಕುತೂಹಲ ಇದೀಗ ಎಲ್ಲೆಡೆ ಮನೆ ಮಾಡಿದೆ.

ಖಡಕ್ ಪೈಪೋಟಿ ನೀಡಲು ಕಾಂಗ್ರೆಸ್ ಟೊಂಕಕಟ್ಟಿದೆ
ಸೆಮಿಫೈನಲ್ಸ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬಿಜೆಪಿ ಅದೇ ಹುಮ್ಮಸ್ಸಿನೊಂದಿಗೆ ಇನ್ನಾರು ತಿಂಗಳಲ್ಲಿ ಅಪರೂಪದ ಫೈನಲ್ಸ್ ಅನ್ನು ಎದುರಿಸಬೇಕಾಗಿದೆ. ಆದರೆ ನಿನ್ನೆ ನಾಲ್ಕೂ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಒಂದು ಘಳಿಗೆಯನ್ನೂ ವೇಸ್ಟ್ ಮಾಡದೆ, ಇನ್ನಾರೇ ತಿಂಗಳಲ್ಲಿ ಖಡಕ್ ಪೈಪೋಟಿ ನೀಡಲು ಟೊಂಕಕಟ್ಟಿ ನಿಂತಿದೆ.

ಈ ಬಾರಿ ಬಿಜೆಪಿಗೆ ಛಾನ್ಸ್ ಇದೆ
ಪಕ್ಷದ ವರಿಷ್ಠರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರುಗಳೇ ಒಪ್ಪಿಕೊಂಡಂತೆ ಪಕ್ಷವು ಆಮೂಲಾಗ್ರವಾಗಿ ಬದಲಾಗಬೇಕಿದೆ. ಮತದಾರನ ಮೈಂಡ್ ಸೆಟ್ ಅನ್ನೇ ಆಮೂಲಾಗ್ರವಾಗಿ ಬದಲಿಸಬೇಕಿದೆ. ಆದರೆ ಇತ್ತೀಚಿನ ಚುನಾವಣೆಗಳ ಟ್ರೆಂಡ್ ನೋಡಿದಾಗ ಪುರಾತನ ಕಾಂಗ್ರೆಸ್ ಪಕ್ಷ ಇನ್ನೂ ಆಲಸ್ಯದಲ್ಲೇ ಇದೆಯೆನ್ನಬಹುದು.
2003 ಮತ್ತು 2008ರಲ್ಲಿ ಅಸೆಂಬ್ಲಿ ಚುನಾವಣೆಗಳಲ್ಲಿ ಗೆದ್ದು ಬಂದ ಪಕ್ಷವು (ಕಾಂಗ್ರೆಸ್) ಅದಾಗುತ್ತಿದ್ದಂತೆ 2004 ಮತ್ತು 2009ರ ಲೋಕಸಭಾ ಚುನಾವಣೆಗಳನ್ನೂ ಬಾಚಿಕೊಂಡಿತ್ತು. ಅದೇ ಪರಿಪಾಠ ಮುಂದುವರಿದ್ದೇ ಆದರೆ ಈ ಬಾರಿ ಬಿಜೆಪಿಗೆ ಛಾನ್ಸ್ ಇದೆ.

ಮಧ್ಯಪ್ರದೇಶ, ರಾಜಸ್ಥಾನdಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆದ್ದಿದೆ
ಪ್ರಮುಖವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆದ್ದು ಬಂದಿರುವುದನ್ನು ನೋಡಿದರೆ ಆ ಎರಡೂ ರಾಜ್ಯಗಳಲ್ಲಿನ ಲೋಕಸಭಾ ಚುನಾವಣೆಗಳು ಪಕ್ಷದಲ್ಲಿ ಬಿಟ್ಟಿಗೆ ಬಿದ್ದಿವೆ ಎಂದೇ ಅರ್ಥೈಸಬಹುದು ಎನ್ನುತ್ತಾರೆ ಮಧ್ಯಪ್ರದೇಶ ಬಿಜೆಪಿ ಉಸ್ತುವಾರಿ ಹೊತ್ತಿದ್ದ ಕರ್ನಾಟಕದ ಸಂಸದ ಅನಂತಕುಮಾರ್. ಗಮನಾರ್ಹವೆಂದರೆ ಈ ರಾಜ್ಯಗಳಲ್ಲಿ ಮೂರನೆಯ ಪಕ್ಷಕ್ಕೆ ಸ್ಥಾನವನ್ನೇ ನೀಡಿಲ್ಲ. ಹಾಗಾಗಿ ಬಿಜೆಪಿಗೆ ಕಾಂಗ್ರೆಸ್ ಬಿಟ್ಟರೆ ಬೇರೆ ಪಕ್ಷಗಳನ್ನು ಎದುರಿಸಬೇಕೆಂಬ ತಲೆನೋವೂ ಇಲ್ಲ.

ಮೋದಿ ಏಕಮೇವಾದ್ವಿತೀಯ ನಾಯಕ
ಎಲ್ಲಕ್ಕಿಂತ ಮುಖ್ಯವಾಗಿ ನಾಲ್ಕೂ ರಾಜ್ಯಗಳ ಫಲಿತಾಂಶವನ್ನು ನೋಡಿದಾಗ ಒಂದು ವಿಷಯ ಸುಸ್ಪಷ್ಟವಾಗಿದೆ. ಏನಪ್ಪಾ ಅಂದರೆ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ನರೇಂದ್ರ ಮೋದಿ ಏಕಮೇವಾದ್ವಿತೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅದಕ್ಕೆ ತಕ್ಕ ಮನ್ನಣೆ ಸಿಕ್ಕಿದೆ. ಸೋ ಇದೇ ಹುಮ್ಮಸ್ಸಿನೊಂದಿಗೆ ಮೋದಿ ನಡೆದಿದ್ದೇ ಹಾದಿ ಎಂಬಂತೆ ಬಿಜೆಪಿ ಮುನ್ನಡೆಯಬಹುದು!












Click it and Unblock the Notifications