ತೆಹೆಲ್ಕಾ ಪ್ರಕರಣದಲ್ಲಿ ರಾಜಕಾರಣಿ ಜಯಾ ಜೇಟ್ಲಿ ದೋಷಿ
ನವದೆಹಲಿ, ಜುಲೈ 26: ರಕ್ಷಣಾ ಇಲಾಖೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮತಾ ಪಕ್ಷದ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಇಬ್ಬರನ್ನು ದೋಷಿಗಳು ಎಂದು ಸಿಬಿಐ ನ್ಯಾಯಾಲಯ ಘೋಷಿಸಿದೆ.
ಹಿರಿಯ ರಾಜಕಾರಣಿ ಜಯಾ ಜೇಟ್ಲಿ, ಸಮತಾ ಪಕ್ಷದ ಮಾಜಿ ಸದಸ್ಯ ಗೋಪಾಲ್ ಪಚೇರ್ವಾಲ್, ಮೇಜರ್ ಜನರಲ್ (ನಿವೃತ್ತ) ಎಸ್. ಪಿ ಮುರುಗೈ ಅವರನ್ನು ಈ ಪ್ರಕರಣದಲ್ಲಿ ತಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ವೀರೇಂದ್ರ ಭಟ್ ಘೋಷಿಸಿ, ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದರು.
2001ರಲ್ಲಿ ಅನಾಮಧೇಯ ಕಂಪನಿಯೊಂದಕ್ಕೆ ನೆರವಲು ರಕ್ಷಣಾ ಇಲಾಖೆ ಮೂಲಕ ಇವರೆಲ್ಲರೂ ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿ ತೆಹಲ್ಕಾ ಸುದ್ದಿ ಸಂಸ್ಥೆಯು ಆಪರೇಷನ್ ವೆಸ್ಟ್ ಎಂಡ್ ಹೆಸರಿನಲ್ಲಿ ಸುದ್ದಿ ಪ್ರಸಾರ ಮಾಡಿತ್ತು.

ತೆಹೆಲ್ಕಾ ಆಪರೇಷನ್ ವೆಸ್ಟ್ ಎಂಡ್ ನಂತರ ಸಮತಾ ಪಾರ್ಟಿಯ ಮುಖಂಡ ಅಂದಿನ ರಕ್ಷಣಾ ಸಚಿವ ಸ್ಥಾನದಿಂದ ಜಾರ್ಜ್ ಫರ್ನಾಂಡೀಸ್ ಅವರು ಬಲವಂತವಾಗಿ ಕೆಳಗಿಳಿಯಬೇಕಾಗಿತ್ತು. ವೆಸ್ಟ್ ಎಂಡ್ ಇಂಟರ್ ನ್ಯಾಷನಲ್ ಎಂಬ ಕಂಪನಿಯಿಂದ ಜಯಾ ಜೇಟ್ಲಿ 2 ಲಕ್ಷ ರು ಹಾಗೂ ಮುರುಗೈ 20 ಸಾವಿರ ರು ಪಡೆದುಕೊಂಡಿದ್ದರು ಎಂದು ಸಂಸ್ಥೆಯ ಪ್ರತಿನಿಧಿ ಮ್ಯಾಥ್ಯೂ ಸ್ಯಾಮುಯಲ್ ಹೇಳಿಕೆ ನೀಡಿದ್ದಾರೆ.
ತೆಹೆಲ್ಕಾ ಸ್ಟಿಂಗ್ ಆಪರೇಷನ್ ವೆಸ್ಟ್ ಎಂಡ್ ಬಗ್ಗೆ ತಮ್ಮ ಜೀವನ ಚರಿತ್ರೆ ಪುಸ್ತಕದಲ್ಲಿ ವಿಸ್ತಾರವಾಗಿ ಸಮತಾ ಪಾರ್ಟಿಯ ಅಧ್ಯಕ್ಷೆ ಜಯಾ ಜೇಟ್ಲಿ ಬರೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಗೆ ತೆಹಲ್ಕಾ ರಕ್ಷಣೆಗೆ ಮುಂದಾಗಿದ್ದರು. ಈ ಬಗ್ಗೆ ಅಂದಿನ ವಿತ್ತ ಸಚಿವ ಪಿ ಚಿದಂಬರಂಗೆ ಏನೆಲ್ಲ ನಿರ್ದೇಶನ ನೀಡಿದ್ದರು ಎಂಬುದನ್ನು ಜಯಾ ಅವರು ವಿವರಿಸಿದ್ದಾರೆ. ತೆಹೆಲ್ಕಾ ಹೂಡಿಕೆದಾರರನ್ನು ಚೆನ್ನಾಗಿ ನೋಡಿಕೊಳ್ಳಿ ಯಾವುದೇ ರೀತಿ ಅನ್ಯಾಯವಾಗಬಾರದು ಎಂದು ಅಂದಿನ ವಿತ್ತ ಸಚಿವ ಪಿ ಚಿದಂಬರಂಗೆ ಸೋನಿಯಾ ಗಾಂಧಿ ಅವರು ಪತ್ರ ಬರೆದಿದ್ದರು ಎಂದು ಜಯಾ ಜೇಟ್ಲಿ ಆರೋಪಿಸಿದ್ದರು. ಆದರೆ, ಇದು ಯಾವುದು ಅವರ ರಕ್ಷಣೆಗೆ ಬರಲೇ ಇಲ್ಲ.












Click it and Unblock the Notifications