ರಾಮನೂ ಒಮ್ಮೆ ಸೀತೆಯ ಬಗ್ಗೆ ಸಂಶಯಪಟ್ಟಿದ್ದ: ಕಾಂಗ್ರೆಸ್ ಸಂಸದ
ನವದೆಹಲಿ, ಆಗಸ್ಟ್ 10: "ಸೀತಾ ಮಾತೆಯಂತೆಯೇ ಮುಸ್ಲಿಂ ಮಹಿಳೆಯರೂ ನೋವನುಭವಿಸಿದ್ದಾರೆ. ಸೀತಾ ಮಾತೆಯ ಮೇಲೆಯೂ ಒಮ್ಮೆ ಶ್ರೀರಾಮ ಅನುಮಾನ ಪಟ್ಟಿರಲಿಲ್ಲವೇ?" ಎಂದು ಕಾಂಗ್ರೆಸ್ ಸಂಸದ ಹುಸೇನ್ ದಲ್ವಾಯಿ ಪ್ರಶ್ನಿಸಿ, ವಿವಾದ ಸೃಷ್ಟಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಂಡನೆಯಾಗಲಿರುವ ತ್ರಿವಳಿ ತಲಾಖ್ ಮಸೂದೆಯ ಕುರಿತು ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಾಡಲು ಎನ್ ಡಿಎ ಸರ್ಕಾರ ಬದ್ಧವಾಗಿಲ್ಲ ಎಂದರು.
"ಮೋದಿ ಸರ್ಕಾರಕ್ಕೆ ಮುಸ್ಲಿಂ ಮಹಿಳೆಯರ ಕಲ್ಯಾಣದ ಅಗತ್ಯವಿಲ್ಲ. ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಹಕ್ಕು ನೀಡುವುದಾಗಿ ಸರ್ಕಾರ ಹೇಳಿದೆ, ಅವರನ್ನು ಸಬಲೀಕರಣಗೊಳಿಸುವುದಾಗ ಬಡಾಯಿ ಕೊಚ್ಚಿಕೊಂಡಿದೆ. ಆದರೆ ಅವೆಲ್ಲವೂ ಆಶ್ವಾಸನೆಯಷ್ಟೆ" ಎಂದು ಅವರು ಟೀಕಿಸಿದ್ದಾರೆ.

ತ್ರಿವಳಿ ತಲಾಖ್ ಅನ್ನು 'ಅಪರಾಧ' ಎಂದು ಪರಿಗಣಿಸುವ ಕುರಿತಂತೆ ಮಾತನಾಡಿದ ಅವರು, 'ಕೇವಲ ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ. ಎಲ್ಲಾ ಸಮುದಾಯದಲ್ಲೂ ಮಹಿಳೆಯರನ್ನು ಕೀಳಾಗಿ ನೋಡಲಾಗಿದೆ. ಹಿಂದು, ಕ್ರೈಸ್ತ, ಸಿಕ್ಖ್ ಮುಂತಾದ ಎಲ್ಲಾ ಸಮುದಾಯದಲ್ಲೂ ಮಹಿಳೆಯರನ್ನು ಸರಿಯಾಗಿ ನಡೆಸಿಕೊಳ್ಳಲಾಗಿಲ್ಲ. ಇದು ಪುರುಷ ಪ್ರಧಾನ ಸಮಾಜ. ಭಗವಾನ್ ಶ್ರೀರಾಮನೇ ಸೀತಾಮಾತೆಯನ್ನು ಒಮ್ಮೆ ಅನುಮಾನದಲ್ಲಿ ನೋಡಿ, ಬಿಟ್ಟುಬಿಟ್ಟಿರಲಿಲ್ಲವೇ?' ಎಂದು ಅವರು ಪ್ರಶ್ನಿಸಿದ್ದಾರೆ.
ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ಲೋಕಸಭೆ ಕಳೆದ ಡಿಸೆಂಬರ್ ನಲ್ಲೇ ಮಂಡಿಸಿದ್ದು, ರಾಜ್ಯಸಭೆಯಲ್ಲಿ ಇಂದು ಈ ಮಸೂದೆ ಮಂಡನೆಯಾಗಲಿದೆ.












Click it and Unblock the Notifications