ಪಕ್ಷಗಳ ಉಚಿತ ಕೊಡುಗೆಗೆ ಆಯೋಗದ ಅಂಕುಶ!
ನವದೆಹಲಿ, ಫೆ.24 : ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಜನರನ್ನು ಸೆಳೆಯಲು ವಿವಿಧ ಘೋಷಣೆಗಳನ್ನು ಮಾಡುವುದಕ್ಕೆ ಚುನಾವಣಾ ಆಯೋಗ ತಡೆ ಹಾಕಿದೆ. ಯಾವ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವೋ ಅವುಗಳನ್ನಷ್ಟೇ ನೀಡಬೇಕು ಎಂದು ಪಕ್ಷಗಳಿಗೆ ಆಯೋಗ ಸೂಚನೆ ನೀಡಿದೆ.
ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಂಪನ್ಮೂಲದ ಸಂಗ್ರಹ ಹೇಗೆ? ಎಂಬ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ರಾಜಕೀಯ ಪಕ್ಷಗಳಿಗೆ ನೀಡಿರುವ ಚುನಾವಣಾ ಮಾರ್ಗಸೂಚಿಯಲ್ಲಿ ಆಯೋಗ ಸ್ಪಷ್ಟವಾಗಿ ಹೇಳಿದೆ. ಇದರ ಮೂಲಕ ಬೇಕಾಬಿಟ್ಟಿ ಘೋಷಣೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ರಾಜಕೀಯ ಪಕ್ಷಗಳಿಗೆ ನೀಡಿರುವ ಮಾರ್ಗಸೂಚಿಯಲ್ಲಿ ರಾಜಕೀಯ ಪಕ್ಷಗಳು ಆಶ್ವಾಸನೆ ನೀಡಬೇಕೆಂದರೆ ಅದಕ್ಕೆ ನ್ಯಾಯಸಮ್ಮತ ಕಾರಣವೇನು ಹಾಗೂ ಅದರ ಈಡೇರಿಕೆಗೆ ಹಣವನ್ನು ಒದಗಿಸುವ ಮಾರ್ಗೋಪಾಯಗಳೇನು ಎಂಬ ವಿವರಣೆಯನ್ನೂ ನೀಡಬೇಕಾಗುತ್ತದೆ ಎಂದು ತಿಳಿಸಿದೆ. [ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ]
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಇಂತದ ಮಾರ್ಗಸೂಚಿಯನ್ನು ನೀಡಿದೆ. ಇದರಿಂದ ಮತದಾರರಿಗೆ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿ ಅವರಲ್ಲಿ ಗೊಂದಲ ಮೂಡಿಸುವ ರಾಜಕೀಯ ಪಕ್ಷಗಳಿಗೆ ಮತ್ತು ಭಾರೀ ಕೊಡುಗೆಗಳನ್ನು ಘೋಷಿಸುವುದಕ್ಕೆ ತೆರೆ ಬೀಳಲಿದೆ.[ಚುನಾವಣಾ ವೇಳಾಪಟ್ಟಿ ಸಿದ್ಧ]
ಕಳೆದ ಬುಧವಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿದ ಆಯೋಗ ಈ ಕುರಿತು ಪ್ರಸ್ತಾಪಿಸಿತ್ತು. ಆದರೆ, ರಾಜಕೀಯ ಪಕ್ಷಗಳು ಚುನಾವಣಾ ಆಶ್ವಾಸನೆ ನೀಡುವುದು ತಮ್ಮ ಹಕ್ಕು ಎಂದು ವಾದಿಸಿ, ಇದರ ವಿರುದ್ಧ ಯಾವುದೇ ಮಾರ್ಗಸೂಚಿಗೆ ಹೊರಡಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದವು.[ಚುನಾವಣಾ ವೆಚ್ಚ ಹೆಚ್ಚಿಸಲು ಪಕ್ಷಗಳ ಮನವಿ]
ನಂತರ ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಈ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಸಂವಿಧಾನದ ತತ್ವ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿರುವ ಯಾವುದೇ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸುವಂತಿಲ್ಲ. ಇವು ಚುನಾವಣಾ ನೀತಿ-ಸಂಹಿತೆಗಳಿಗೆ ಬದ್ಧವಾಗಿರಬೇಕು ಎಂದು ಆಯೋಗ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ಮಾರ್ಗಸೂಚಿಯನ್ನು ರಾಜಕೀಯ ಪಕ್ಷಗಳಿಗೆ ಹೊರಡಿಸುವಂತೆ ಸುಪ್ರೀಂಕೋರ್ಟ್ 2013ರ ಜುಲೈ 5ರಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಅದರ ಅನ್ವಯ ಚುನಾವಣಾ ಆಯೋಗ ಮಾರ್ಗಸೂಚಿ ರಚಿಸಿದೆ.












Click it and Unblock the Notifications