ರಾತ್ರಿಪೂರ್ತಿ ಇಡಿ ಕಚೇರಿಯಲ್ಲೇ ಕಳೆಯಲಿರುವ ಡಿ. ಕೆ. ಶಿವಕುಮಾರ್
ನವದೆಹಲಿ, ಸೆಪ್ಟೆಂಬರ್ 03: ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿಲ್ಲ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರದಿಂದ ನಾಲ್ಕು ದಿನದ ವರೆಗೆ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗಿತ್ತು, ಆದರೆ ಕೊನೆಗೆ ಇಂದು ಅವರನ್ನು ಬಂಧಿಸಲಾಗಿದೆ.
ಬಂಧನದ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ತಪಾಸಣೆ ನಂತರ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಹಾಗೆ ಆಗಲಿಲ್ಲ.

ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಬದಲಿಗೆ ಅಥವಾ ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗುವ ಬದಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಮತ್ತೆ ಲೋಕನಾಯಕ ಭವನದಲ್ಲಿನ ಇಡಿ ಕಚೇರಿಗೆ ವಾಪಸ್ ಕರೆತರಲಾಗಿದೆ.
ಇಂದು ಇಡಿ ಕಚೇರಿಯ ಕೊಠಡಿಯಲ್ಲೇ ಬಂಧಿಯಾಗಿರಲಿರುವ ಡಿ.ಕೆ.ಶಿವಕುಮಾರ್ ಅವರನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ನಾಳೆ ಜಾಮೀನು ಅರ್ಜಿ ಸಲ್ಲಿಸಲು ಈಗಾಗಲೇ ಡಿಕೆಶಿ ಪರ ವಕೀಲರು ಸಜ್ಜಾಗಿದ್ದಾರೆ. ನಾಳೆಯೇ ಡಿಕೆಶಿ ಪರ ವಕೀಲರು ಜಾಮೀನು ಕೊಡಿಸಲು ಸರ್ವ ಸನ್ನದ್ಧವಾಗಿದ್ದಾರೆ.












Click it and Unblock the Notifications