ಯಾವ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ದಾರೆ ಎಂಬುದು ತಿಳಿದಿಲ್ಲ: ಡಿಕೆಶಿ
ನವದೆಹಲಿ, ಸೆ,19: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
60 ವರ್ಷದ ಡಿ ಕೆ ಶಿವಕುಮಾರ್, ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಫೆಡರಲ್ ಏಜೆನ್ಸಿಯ ಕಚೇರಿಗೆ ಕೆಲವರ ಜೊತೆಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಲುಪಿದರು.
ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಇಡಿ ಕಳೆದ ವಾರ ಸಮನ್ಸ್ ನೀಡಿತ್ತು. ಏಜೆನ್ಸಿಯ ಮುಂದೆ ಹಾಜರಾಗಲು ಕೇಳಲಾದ ಪ್ರಕರಣದ ಬಗ್ಗೆ ತನಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿ ಸಿಬಿಐ ಅವರ ವಿರುದ್ಧದ ಪ್ರಕರಣವನ್ನು ತನಿಖೆಗೆ ತೆಗೆದುಕೊಂಡ ನಂತರ ತನಿಖಾ ಸಂಸ್ಥೆ ಇತ್ತೀಚಿನ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಭಾರತ್ ಜೋಡೋ ಯಾತ್ರೆ ಮಧ್ಯೆ ಡಿಕೆಶಿಗೆ ಸಮನ್ಸ್
"ಭಾರತ ಜೋಡೋ ಯಾತ್ರೆ ಹಾಗೂ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್ ನೀಡಿದೆ. ನಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ, ಈ ಸಮನ್ಸ್ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ" ಎಂದು ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದರು.

ರಾಜ್ಯದಲ್ಲಿ ಭಾರತ್ ಜೋಡೋಗೆ ಡಿಕೆಶಿ ನೇತೃತ್ವ
2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನ ಸಂಪರ್ಕ ಕಾರ್ಯಕ್ರಮವಾದ 'ಭಾರತ್ ಜೋಡೋ ಯಾತ್ರೆ'ಗೆ ಸೆಪ್ಟೆಂಬರ್ 07 ರಂದು ಕನ್ಯಾಕುಮಾರಿಯಿಂದ ಚಾಲನೆ ನೀಡಲಾಗಿದೆ. ಈ ಪಾದಯಾತ್ರೆಯು 150 ದಿನಗಳಲ್ಲಿ 3,500 ಕಿ.ಮೀ ಸಾಗಲಿದೆ. ಸೆಪ್ಟೆಂಬರ್ 30 ರಂದು ಗುಂಡ್ಲುಪೇಟೆ ಮೂಲಕ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ ಮಾಡಲಿದೆ.
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಣ ತೊಟ್ಟಿದ್ದಾರೆ. ಸೆಪ್ಟೆಂಬರ್ 30 ರಂದು ಗುಂಡ್ಲುಪೇಟೆಗೆ ಬರಲಿರುವ ಯಾತ್ರಗೆ ಸಿದ್ಧತೆ ನಡೆಸುತ್ತಿದ್ದಾರೆ.

ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ
ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿರುವ ಡಿಕೆ ಶಿವಕುಮಾರ್ ಅವರ ಸಹೋದರ, ಸಂಸದ ಡಿಕೆ ಸುರೇಶ್ ಇದು ರಾಜಕೀಯ ಸೇಡು ಎಂದಿದ್ದಾರೆ.
"ಅವರು ಯಾವ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ದಾರೆ ಎಂಬುದು ತಿಳಿದಿಲ್ಲ. ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ರಾಜಕೀಯ ಸೇಡು. ಕರ್ನಾಟಕದಲ್ಲಿ ಚುನಾವಣೆಗೆ 6 ತಿಂಗಳು ಬಾಕಿಯಿದೆ. ಹೀಗಾಗಿ ವಿರೋಧ ಪಕ್ಷಗಳನ್ನು ಬೆದರಿಸುತ್ತಿದ್ದಾರೆ" ಎಂದಿದ್ದಾರೆ.
"ಇಡಿ ಕಚೇರಿಯೇ ಬಿಜೆಪಿ ಕಚೇರಿಯಾಗಿದೆ. ಬಿಜೆಪಿ ಕಚೇರಿಯಲ್ಲಿ ಸ್ಕ್ರಿಪ್ಟ್ ರೈಟಿಂಗ್ ನಡೆಯುತ್ತದೆ ಅದು ಇಡಿ ಕಚೇರಿಯಲ್ಲಿ ಅನುಷ್ಠಾನಕ್ಕೆ ಬರುತ್ತದೆ" ಎಂದು ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

2019ರಲ್ಲಿ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್
ಮತ್ತೊಂದು ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸೆಪ್ಟೆಂಬರ್ 3, 2019 ರಂದು ಶಿವಕುಮಾರ್ ಅವರನ್ನು ಬಂಧಿಸಿತ್ತು. ಅದೇ ವರ್ಷ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಆದಾಯ ತೆರಿಗೆ ಇಲಾಖೆ ಚಾರ್ಜ್ ಶೀಟ್ ಗಮನದಲ್ಲಿಟ್ಟುಕೊಂಡು ಈ ವರ್ಷದ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಸಂಸ್ಥೆಯು ಡಿಕೆ ಶಿವಕುಮಾರ್ ಮತ್ತು ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.












Click it and Unblock the Notifications