ಕಾಶ್ಮೀರ ಬೇಕು, ಕಾಶ್ಮೀರಿಗಳು ಬೇಡ; ಇದ್ಯಾವ ನ್ಯಾಯ?: ಚಿದಂಬರಂ ವಿಷಾದ
ನವದೆಹಲಿ, ಫೆಬ್ರವರಿ 21: ಕೆಲವು ಜನರಿಗೆ ಕಾಶ್ಮೀರವು ಭಾರತದ ಭಾಗವಾಗಬೇಕಿದೆ. ಆದರೆ, ಅವರಿಗೆ ಕಾಶ್ಮೀರಿಗಳು ಭಾರತೀಯರ ಭಾಗವಾಗುವುದು ಬೇಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ವಿಷಾದಿಸಿದ್ದಾರೆ.
ಕಾಶ್ಮೀರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮತ್ತು ಪ್ರವಾಸಿಗರಾಗಿ ಆ ರಾಜ್ಯಕ್ಕೆ ಭೇಟಿ ನೀಡದಂತೆ ಸಲಹೆ ನೀಡಿರುವ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಅವರ ಹೇಳಿಕೆಗೆ ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಸ್ಥಳೀಯ ಕಾಶ್ಮೀರದ ಯುವಕನೇ ನಡೆಸಿರುವುದು ಭಾರತಕ್ಕೆ ಆಘಾತ ನೀಡಿದೆ. ಸ್ಥಳೀಯರು ಭಾರತದ ವಿರುದ್ಧ ಪ್ರತಿಭಟನೆ ನಡೆಸುವುದು, ಉಗ್ರರ ಸಂಘಟನೆ ಸೇರಿಕೊಳ್ಳುವುದು ಹೊಸತೇನಲ್ಲ. ಆದರೆ, ಸ್ಥಳೀಯ ಯುವಕರನ್ನು ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಲು ಬಳಸಿಕೊಂಡಿರುವುದು ಇದೇ ಮೊದಲು.
ಕಾಶ್ಮೀರದ ಯುವಕ ಈ ಕೃತ್ಯ ಎಸಗಿದ್ದಾನೆ ಎಂಬ ಸುದ್ದಿ ಜನರನ್ನು ಕೆರಳಿಸಿದೆ. ದೇಶದ ವಿವಿಧೆಡೆ ಶಿಕ್ಷಣ ಪಡೆಯಲು ಬಂದಿರುವ ಕಾಶ್ಮೀರದ ವಿದ್ಯಾರ್ಥಿಗಳ ಮೇಲೆ ಹಲ್ಲೆಯಂತಹ ದೌರ್ಜನ್ಯಗಳು ನಡೆದ ಘಟನೆಗಳು ವರದಿಯಾಗಿವೆ. ಆದರೆ, ಈ ರೀತಿಯ ಘಟನೆಗಳು ನಡೆದಿಲ್ಲ. ಯಾರ ಮೇಲೆಯೂ ದೌರ್ಜನ್ಯವಾಗಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಿ ಚಿದಂಬರಂ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕಾಶ್ಮೀರದಲ್ಲಿ ಉಗ್ರರ ದಾಳಿಯ ಬಳಿಕ ನಡೆದ ಘಟನೆಗಳು, ಕಾಶ್ಮೀರಿಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಬೇಡಿ. ಕಾಶ್ಮೀರಕ್ಕೆ ತೆರಳಬೇಡಿ ಎನ್ನುವಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದರ ಬಗ್ಗೆ ವಿಷಾದ ವ್ಯಕ್ತಪಡಿಸಿ ಪಿ. ಚಿದಂಬರಂ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
|
ಪರಿಸ್ಥಿತಿಯ ವ್ಯಂಗ್ಯ
'ಪರಿಸ್ಥಿತಿಯ ವ್ಯಂಗ್ಯ ಖೇದನೀಯವಾಗಿದೆ. ನಾವು ಕಾಶ್ಮೀರವು ಭಾರತದ ಭಾಗವಾಗಬೇಕೆಂದು ಬಯಸುತ್ತೇವೆ. ಆದರೆ ಕಾಶ್ಮೀರಿಗಳು ಭಾರತದ ಭಾಗವಾಗುವುದನ್ನು ಇಷ್ಟಪಡುವುದಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.
|
ಪಟೇಲರು ನೋಡುತ್ತಿದ್ದಾರೆ!
ಗುಜರಾತ್‌ನ ಸರ್ದಾರ್ ಸರೋವರ್ ಅಣೆಕಟ್ಟೆಯ ಸಮೀಪ ಇರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತೆಯ ಪ್ರತಿಮೆಯು ಕಾಶ್ಮೀರಿಗಳಿಗೆ ಭಾರತದಲ್ಲಿ ಜಾಗವಿಲ್ಲ ಎಂದು ಯೋಚಿಸುತ್ತಿರುವ ಮೇಘಾಲಯದ ರಾಜ್ಯಪಾಲರು ಮತ್ತು ಇತರರನ್ನು ದಿಟ್ಟಿಸುತ್ತಿದೆ ಎಂದು ಮಾರ್ಮಿಕವಾಗಿ ಚಿದಂಬರಂ ಹೇಳಿದ್ದಾರೆ.
|
ಸುದ್ದಿಗಳು ಸುಳ್ಳೇ?
ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರಾಕರಿಸಿದೆ. ಹಾಗಾದರೆ ಎಲ್ಲ ಸುದ್ದಿಪತ್ರಿಕೆಗಳೂ ಸುಳ್ಳು ವರದಿ ಪ್ರಕಟಿಸಿವೆಯೇ? ಎಂದು ಪ್ರಶ್ನಿಸಿದ್ದಾರೆ.
|
ಮನುಷ್ಯರು ಎಂದುಕೊಂಡಿಲ್ಲವೇ?
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕಾಶ್ಮೀರದ ಸಚಿವರನ್ನು ಮನುಷ್ಯರು ಎಂದುಕೊಂಡಿಲ್ಲವೇ? ಮತ್ತು ಸಂಪನ್ಮೂಲವಾಗಿ? ತಮ್ಮ ಸ್ವಯಂ ಅಭಿವೃದ್ಧಿಗೆ ಅವರು ಎಲ್ಲಿಯೂ ಶಿಕ್ಷಣ ಪಡೆದುಕೊಳ್ಳುವಂತಿಲ್ಲವೇ? ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.












Click it and Unblock the Notifications