ಜಾಗೃತ ದೆಹಲಿಗರು ಒಗ್ಗಟ್ಟು ಪ್ರದರ್ಶಿಸಿದ್ದು ಇದೇ ಮೊದಲಲ್ಲ
ನವದೆಹಲಿ, ಫೆ. 11: ರಾಷ್ಟ್ರದ ರಾಜಧಾನಿ ದೆಹಲಿ ನಿವಾಸಿಗರು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಒಗ್ಗಟ್ಟು ತೋರಿಸಿದ್ದಾರೆ. ಈ ಮೂಲಕ ತಮ್ಮ ಮೇಲೆ ಯಾವುದೇ ಪಕ್ಷ ಸಿದ್ಧಾಂತ ಹೇರುವ ಮೂಲಕ ಒಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನೂ ನಿರೂಪಿಸಿದ್ದಾರೆ.
ರಾಜ್ಯವನ್ನು 15 ವರ್ಷಗಳ ಕಾಲ ನಿರಂತರವಾಗಿ ಆಳಿದ ಕಾಂಗ್ರೆಸ್ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಏಳು ಲೋಕಸಭೆ ಕ್ಷೇತ್ರಗಳಲ್ಲೂ ಗೆಲುವಿನ ನಗೆ ಬೀರಿದ್ದ ಬಿಜೆಪಿ ಪಕ್ಷಗಳಿಗೆ ಕನಸಿನಲ್ಲೂ ಎಣಿಸದಂತಹ ಸೋಲುಣಿಸಿದ್ದಾರೆ ದೆಹಲಿಗರು. [ಮೋದಿ, ಶಾ ಮಾಡಿದ ಯಡವಟ್ಟೇನು?]
ರಾಷ್ಟ್ರದ ರಾಜಧಾನಿಯಾಗಿದ್ದರೂ ಈ ರಾಜ್ಯದ ವಾರ್ಷಿಕ ಬಜೆಟ್ ಮೊತ್ತ 15 ರಿಂದ 20 ಸಾವಿರ ಕೋಟಿ ರು. ಮಾತ್ರ. ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕೇಂದ್ರ ಸರ್ಕಾರದ್ದೇ ಪಾರಮ್ಯ. ಆದ್ದರಿಂದ ದೆಹಲಿಯ ಮುಖ್ಯಮಂತ್ರಿ ಸಾಮಂತ ರಾಜನಂತೆ ಆಡಳಿತ ನಡೆಸಬೇಕು.
ಆದರೂ ಈ ಬಾರಿಯ ಚುನಾವಣೆ ಹಿಂದೆಂದೂ ಇಲ್ಲದಂತೆ ದೇಶದ ಗಮನ ಸೆಳೆಯಿತು. ಅಮೆರಿಕ ಸೇರಿದಂತೆ ಪ್ರಮುಖ ಪಾಶ್ಚಿಮಾತ್ಯ ರಾಷ್ಟ್ರಗಳ ದಿನಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಯಿತು. ಇದಕ್ಕೆಲ್ಲ ಕಾರಣ 'ಆಮ್ ಆದ್ಮಿ' ಎಂಬ ಜನಸಾಮಾನ್ಯರ ಪಕ್ಷ. [ಆಮ್ ಆದ್ಮಿ ಗೆಲುವಿನ ಗುಟ್ಟೇನು?]
ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಭದ್ರ ಐತಿಹಾಸಿಕ ಹಾಗೂ ಆರ್ಥಿಕ ಸಾಮರ್ಥ್ಯ ಹೊಂದಿರುವ ಪಕ್ಷಗಳನ್ನು ತಿರಸ್ಕರಿಸಿ ಆಮ್ ಆದ್ಮಿ ಎಂಬ ಜನಕ್ರಾಂತಿ ಸಂಘಟನೆಯನ್ನು ಬೆಂಬಲಿಸುವಲ್ಲಿ ದೆಹಲಿಗರು ತೋರಿದ ಒಗ್ಗಟ್ಟು ಇಡೀ ದೇಶದಲ್ಲಿ ಮನೆಮಾತಾಗಿದೆ. [ಎಎಪಿ ಕಾರ್ಯಕರ್ತರ ಗೆಲುವಿನ ಸಂಭ್ರಮ]
ದೆಹಲಿಗರ ಈ ಒಗ್ಗಟ್ಟಿನ ವರ್ತನೆ ಇದೇ ಮೊದಲಲ್ಲ. ಹಲವು ವರ್ಷಗಳಿಂದ ಅವರು ಪ್ರಬುದ್ಧವಾಗಿ ಏಕತೆ ಎಂಬ ಮಂತ್ರ ಪಠಿಸುತ್ತಿದ್ದಾರೆ. ಈ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ತಾವು ರಾಷ್ಟ್ರದ ರಾಜಧಾನಿಯ ನಿವಾಸಿಗಳು ಎಂಬುದನ್ನು ನಿರೂಪಿಸಿದ್ದಾರೆ. ಈ ಕುರಿತು ಕೆಲವು ಉದಾಹರಣೆಗಳು ಇಲ್ಲಿವೆ.

2009ರಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ
ದೆಹಲಿಗರು 2009ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಆಗ ಯುಪಿಎ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು.

ಅಣ್ಣಾ ಹಜಾರೆ ಪರ ಬೀದಿಗಿಳಿದರು
ಯುಪಿಎ ಸರ್ಕಾರ 1.76 ಲಕ್ಷ ಕೋಟಿ ರು. ಮೊತ್ತದ 2ಜಿ ಹಗರಣ ಬಯಲಿಗೆ ಬಂದ ನಂತರ ಲೋಕಪಾಲ ಬಿಲ್ ಜಾರಿಗೆ ತರಲು ಆಗ್ರಹಿಸಿ ಅಣ್ಣಾ ಹಜಾರೆ ಉಪವಾಸ ನಿರಶನ ಕೈಗೊಂಡಾಗ ಹಲವು ದಿನಗಳ ಕಾಲ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಯುವಜನತೆ ಕಚೇರಿಗೆ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿರ್ಭಯಾ ಅತ್ಯಾಚಾರಕ್ಕೆ ರೊಚ್ಚಿಗೆದ್ದರು
ನವದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಇಡೀ ರಾಜ್ಯದ ಜನ ಬೀದಿಗಿಳಿದು ಪ್ರತಿಭಟಿಸಿದ್ದರು. ಜನರ ಆಕ್ರೋಶದ ತೀವ್ರತೆ ಎಷ್ಟಿತ್ತೆಂದರೆ ಕೇಂದ್ರ ಸರ್ಕಾರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಹೊಸ ಕಾನೂನು ರೂಪಿಸಿತು.

ಮೋದಿಗೆ ಜೈ ಎಂದರು
2014ರ ಲೋಕಸಭೆ ಚುನಾವಣೆ ಸಂದರ್ಭ ಎಲ್ಲ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿದ್ದರು. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೂರು ದಶಕಗಳ ನಂತರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

ಆಮ್ ಆದ್ಮಿ ಪರ ನಿಂತರು
ಈಗ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಎಂಬ ನೂತನ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರಿಸಿದೆ. ಇಲ್ಲಿ ಬಿಜೆಪಿ ನಿಷ್ಠ ಎನ್ನಲಾದ ಶೇ. 30ರಷ್ಟು ಮತಗಳು ಅದಕ್ಕೇ ಬಿದ್ದರೂ ಗೆಲ್ಲುವಲ್ಲಿ ವಿಫಲವಾಗಿದೆ.

ತಿರಸ್ಕಾರದಲ್ಲೂ ಒಗ್ಗಟ್ಟು
2015ರ ವಿಧಾನಸಭೆ ಚುನಾವಣೆಯಲ್ಲಿ 62 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಆಮ್ ಆದ್ಮಿಯನ್ನು ಬೆಂಬಲಿಸುವುದರಲ್ಲಿ ತೋರಿದ ಒಗ್ಗಟ್ಟನ್ನು ಹಲವು ಅಭ್ಯರ್ಥಿಗಳನ್ನು ತಿರಸ್ಕರಿಸುವುದರಲ್ಲಿಯೂ ತೋರಿದ್ದಾರೆ.












Click it and Unblock the Notifications