ದೆಹಲಿ ಗಡಿಯಲ್ಲಿ ನಿಯೋಜಿಸಿದ್ದ ಹೆಚ್ಚುವರಿ ಭದ್ರತಾ ಸಿಬ್ಬಂದಿ ವಾಪಸ್
ನವದೆಹಲಿ, ಫೆಬ್ರವರಿ.09: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿ ಗಡಿಯಲ್ಲಿ ನಿಯೋಜಿಸಿದ್ದ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ.
ನವದೆಹಲಿಯ ಪೊಲೀಸರು ಮತ್ತು ಹೆಚ್ಚುವರಿ ಭದ್ರತಾ ಪಡೆಯ ನಡುವಿನ ಆಂತರಿಕ ಮಾತುಕತೆ ಬಳಿಕ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಈ ಮೊದಲು ನಿಯೋಜನೆಗೊಂಡಿದ್ದ ಜಿಲ್ಲೆ ಮತ್ತು ಪ್ರದೇಶಗಳಿಗೆ ವಾಪಸ್ ಕಳುಹಿಸಲಾಗಿದೆ.
ಕಳೆದ ಜನವರಿ.26ರಂದು 72ನೇ ಗಣರಾಜ್ಯೋತ್ಸವದ ದಿನವೇ ನಡೆದ ಹಿಂಸಾಚಾರದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕೃಷಿ ಕಾಯ್ದೆ ವಿರುದ್ಧ ಅಕ್ಟೋಬರ್ ವರೆಗೂ ಹೋರಾಟ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಮೂರು ಗಡಿಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಈಗಾಗಲೇ 77 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ.












Click it and Unblock the Notifications