ಸಚಿವ ಸ್ಥಾನ ತೊರೆದ ತೋಮರ್, ನಾಲ್ಕು ದಿನ ಪೊಲೀಸರ ವಶಕ್ಕೆ
ನವದೆಹಲಿ, ಜೂ. 10 : ದೆಹಲಿಯ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ತಮ್ಮ ಸ್ಥಾನಕ್ಕೆ ಮಂಗಳವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ. ನಕಲಿ ಪದವಿ ಪ್ರಮಾಣ ಪತ್ರ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಮಂಗಳವಾರ ಬೆಳಗ್ಗೆ ತೋಮರ್ ಅವರನ್ನು ಬಂಧಿಸಿದ್ದ ದೆಹಲಿ ಪೊಲೀಸರು ಸಂಜೆ ಮೆಟ್ರೋಪಾಲಿಟನ್ ನ್ಯಾಯಾಲಯದ ಎದುರು ಹಾಜರು ಪಡಿಸಿದರು. ಪ್ರಮಾಣ ಪತ್ರಗಳನ್ನು ಸಚಿವರು ಎಲ್ಲಿಂದ ಪಡೆದರು? ಎಂಬ ಬಗ್ಗೆ ವಿವಿರವಾದ ತನಿಖೆಯಾಗಬೇಕು. ಆದ್ದರಿಂದ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಮನವಿ ಮಾಡಿದರು. [ತೋಮಾರ್ ಬಂಧನ, ಮೋದಿ ಬನಾನ ರಿಪಬ್ಲಿಕ್ ಮಾಡ್ತಾರೆ: ಎಎಪಿ]

ಜಾಮೀನು ನೀಡಲು ಮನವಿ : ಪದವಿ ಪ್ರಮಾಣ ಪತ್ರಗಳು ಅಸಲಿಯೋ, ನಕಲಿಯೋ? ಎಂದು ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ಬೇಕು. ಆದ್ದರಿಂದ ತಮ್ಮ ಕಕ್ಷಿದಾರರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಜಿತೇಂದ್ರ ಸಿಂಗ್ ತೋಮರ್ ಪರ ವಕೀಲರು ವಾದ ಮಂಡಿಸಿದರು. ಆದರೆ, ಕೋರ್ಟ್ ತೋಮರ್ ಅವರನ್ನು 4 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತು. [ನಕಲಿ ಪದವಿ ವಿವಾದ : ದೆಹಲಿ ಸಚಿವ ತೋಮಾರ್ ಬಂಧನ]
ತೋಮರ್ ರಾಜೀನಾಮೆ : ಪೊಲೀಸರ ವಶದಲ್ಲಿರುವ ಜಿತೇಂದ್ರ ಸಿಂಗ್ ತೋಮರ್ ಮಂಗಳವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿ ಕೊಟ್ಟಿದ್ದಾರೆ. ಕೇಜ್ರಿವಾಲ್ ರಾಜೀನಾಮೆ ಅಂಗೀಕರಿಸಿದ್ದು, ಇಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ರವಾನಿಸಲಿದ್ದಾರೆ.
ಪ್ರಕರಣವೇನು? : ಬಿಹಾರದ ಮುಂಗರ್ ನಗರದ ಕಾನೂನು ಸಂಸ್ಥೆಯಿಂದ ತೋಮರ್ ಪಡೆದ ಪದವಿ ಪ್ರಮಾಣ ಪತ್ರ ನಕಲಿ ಎಂದು ದೆಹಲಿ ವಕೀಲರ ಸಂಘ ಅವರ ವಿರುದ್ಧ ದೂರು ನೀಡಿತ್ತು. ತನಿಖೆ ಕೈಗೊಂಡ ದಕ್ಷಿಣ ದೆಹಲಿಯ ಹೌಜ್‌ಖಾಸ್ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದರು, ಮಂಗಳವಾರ ಬೆಳಗ್ಗೆ ತೋಮರ್ ಅವರನ್ನು ಬಂಧಿಸಿದ್ದರು. [ಪಿಟಿಐ ಚಿತ್ರ]












Click it and Unblock the Notifications